Wed. Oct 14th, 2026

ಅಕ್ಟೋಬರ್ 21 ರಂದು ರಾಜ್ಯಮಟ್ಟದಲ್ಲಿ ಶ್ರೀ ಮಧ್ವಾಚಾರ್ಯರ ಜಯಂತಿ ಆಚರಣೆ: ಸಚಿವ ಶಿವರಾಜ ತಂಗಡಗಿ

Share this with Friends

ಬೆಂಗಳೂರು: ಭಾರತೀಯ ಅಧ್ಯಾತ್ಮಿಕ ಲೋಕದ ಮುಕುಟ ಮಣಿಯಂತಿರುವ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಇನ್ಮುಂದೆ ಪ್ರತಿ ವರ್ಷ ಸರ್ಕಾರದ ವತಿಯಿಂದಲೇ ಅಧಿಕೃತವಾಗಿ ಆಚರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಪ್ರಕಟಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರತಿ ವರ್ಷ ಅಕ್ಟೋಬರ್ 21 ರಂದು ರಾಜ್ಯಮಟ್ಟದಲ್ಲಿ ಈ ಜಯಂತಿ ಮಹೋತ್ಸವವನ್ನು ಸಡಗರದಿಂದ ಆಚರಿಸಲು ಅಗತ್ಯವಿರುವ ಅಧಿಕೃತ ಸರ್ಕಾರಿ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರತದ ದಾರ್ಶನಿಕ ಇತಿಹಾಸದಲ್ಲಿ ಶ್ರೀ ಮಧ್ವಾಚಾರ್ಯರ ಕೊಡುಗೆ ಅನನ್ಯವಾಗಿದೆ. ಸನಾತನ ಧರ್ಮದ ನೈತಿಕ ಮೌಲ್ಯಗಳ ಪ್ರತಿಪಾದನೆ, ತತ್ವಶಾಸ್ತ್ರದ ಪ್ರಸಾರ ಹಾಗೂ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಅವರು ಕೈಗೊಂಡ ಮಹತ್ಕಾರ್ಯಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯು ಅವರ ಜ್ಞಾನ ಮತ್ತು ಸಿದ್ಧಾಂತಗಳನ್ನು ಸಾರ್ವಜನಿಕರಿಗೆ ತಲುಪಿಸಲು ಈ ವಿಶೇಷ ದಿನವನ್ನು ಆಚರಿಸಲು ಮುಂದಾಗಿದೆ ಎಂದು ಸಚಿವರು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ರಾಜ್ಯಮಟ್ಟದ ಜಯಂತಿ ಆಚರಣೆಯು ನಾಡಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಇತಿಹಾಸಕ್ಕೆ ಹೊಸ ಮೆರುಗು ನೀಡಲಿದ್ದು, ಅಕ್ಟೋಬರ್ 21 ರಂದು ವಿವಿಧ ಗಣ್ಯರ ಸಮ್ಮುಖದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ 5 ಉಪ ಸಮಿತಿಗಳ ರಚನೆ:  

ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ ಪ್ರಕ್ರಿಯೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಸರ್ಕಾರ ಐದು ಪ್ರತ್ಯೇಕ ಉಪ ಸಮಿತಿಗಳನ್ನು ರಚಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯ ಉನ್ನತ ಮಟ್ಟದ ಸದಸ್ಯರೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಪ್ರಶಸ್ತಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಹಾಗೂ ಸಾಧಕರ ಗುರುತಿಸುವಿಕೆ ಪ್ರಕ್ರಿಯೆ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ.ಪ್ರಶಸ್ತಿ ವಿಜೇತರ ಆಯ್ಕೆಯಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ನಿಷ್ಪಕ್ಷಪಾತವಾಗಿ ಅರ್ಹರನ್ನು ಆಯ್ಕೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ರಚಿಸಲಾಗಿರುವ ಐದು ಉಪ ಸಮಿತಿಗಳು ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಅರ್ಹ ಸಾಧಕರ ಹೆಸರುಗಳನ್ನು 1:2 ಅನುಪಾತದ ಆಧಾರದ ಮೇಲೆ ಮುಖ್ಯ ಸಮಿತಿಗೆ ಶಿಫಾರಸು ಮಾಡಲಿವೆ. ಈ ಶಿಫಾರಸುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಅಂತಿಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ತೆರೆಮರೆಯಲ್ಲಿದ್ದುಕೊಂಡು ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅನನ್ಯ ಹಾಗೂ ಮಹತ್ವದ ಕೊಡುಗೆ ನೀಡಿದ ನೈಜ ಸಾಧಕರನ್ನು ಹುಡುಕಿ ಗೌರವಿಸುವುದೇ ನಮ್ಮ ಸರ್ಕಾರದ ಪ್ರಮುಖ ಆಶಯವಾಗಿದೆ. ಈ ನಿಟ್ಟಿನಲ್ಲಿ ಅರ್ಹರಿಗೆ ಮಾತ್ರ ಪ್ರಶಸ್ತಿ ಲಭಿಸುವಂತೆ ಉಪ ಸಮಿತಿಗಳು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 


Share this with Friends

Related Post