ಆನೇಕಲ್: ಮುಖ್ಯಮಂತ್ರಿಗಳ ವಿರುದ್ಧದ ಕಥಿತ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ತಕ್ಷಣವೇ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು. ಇಲ್ಲದಿದ್ದರೆ ಈ ಕೃತ್ಯದ ಹಿಂದೆ ಆಡಳಿತ ಪಕ್ಷದ ನಾಯಕರೇ ಇದ್ದಾರೆ ಎಂಬುದು ಸಾಬೀತಾಗುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣಾ ಪ್ರಚಾರದ ವೇಳೆ ಆನೇಕಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೆನ್ಡ್ರೈವ್ ಹಾಗೂ ರಹಸ್ಯ ಕಾರ್ಯಾಚರಣೆಗಳ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದ ಘನತೆಯನ್ನು ದೇಶದಾದ್ಯಂತ ಹರಾಜು ಹಾಕುತ್ತಿದೆ. ಇದು ಅತ್ಯಂತ ಕೆಳಮಟ್ಟದ ರಾಜಕಾರಣವಾಗಿದ್ದು, ಸಿಡಿ ಮತ್ತು ಪೆನ್ಡ್ರೈವ್ ಫ್ಯಾಕ್ಟರಿಗಳ ಹಾವಳಿಯಿಂದಾಗಿ ರಾಜ್ಯದ ಸಭ್ಯ ರಾಜಕೀಯದ ವಾತಾವರಣವೇ ಮಲಿನಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಕೇವಲ ಮೇಲ್ನೋಟದ ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟು ಗೃಹ ಸಚಿವರಿಂದ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು. ಆದರೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ವಯಂಪ್ರೇರಿತವಾಗಿ ತನಿಖೆಗೆ ಆದೇಶಿಸದೆ ಕೇವಲ ರಾಜಕೀಯ ಪ್ರಲಾಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಮತ್ತು ಅಹಿಂದ ಚಳವಳಿಯನ್ನು ಹತ್ತಿಕ್ಕಲು ಕಾಂಗ್ರೆಸ್ ಒಳಗಿನವರೇ ಈ ಸಂಚು ರೂಪಿಸಿದ್ದಾರೆ ಎಂಬ ಸಂಶಯ ದಟ್ಟವಾಗಿದೆ ಎಂದು ಅವರು ನುಡಿದರು.
ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ್, ಬರದ ಹಿನ್ನೆಲೆಯಲ್ಲಿ ರೈತರಿಗೆ ಸರ್ಕಾರ ನೀಡಿದ ₹2,500 ಪರಿಹಾರ ಯಾವುದಕ್ಕೂ ಸಾಲದಾಗಿದೆ. ಹಾಲಿನ ದರ ಏರಿಕೆ ಅಪ್ರಸ್ತುತವಾಗಿದ್ದು, ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಹಾಲಿನ ಪ್ರೋತ್ಸಾಹಧನ ನೀಡಿದ್ದರೆ ಇದರ ಅಗತ್ಯವೇ ಇರುತ್ತಿರಲಿಲ್ಲ. ಇದರ ಜೊತೆಗೆ ಆನೇಕಲ್ ಭಾಗವನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲು ಹೊರಟಿರುವುದು ಕೇವಲ ರಿಯಲ್ ಎಸ್ಟೇಟ್ ಹಿತಾಸಕ್ತಿಗಾಗಿಯೇ ಹೊರತು ಸಾರ್ವಜನಿಕ ಅಭಿವೃದ್ಧಿಗಾಗಿ ಅಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಇನ್ನು ವಿಧಾನಪರಿಷತ್ ಚುನಾವಣೆಯ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಅವರು, ಜೆಡಿಎಸ್ ಹಾಗೂ ಬಿಜೆಪಿಯ ಜಂಟಿ ಒಕ್ಕೂಟದ (NDA) ಅಭ್ಯರ್ಥಿ ಎ.ಪಿ. ರಂಗನಾಥ್ ಪರ ಉತ್ತಮ ವಾತಾವರಣವಿದ್ದು, ಈ ಬಾರಿಯ ನಾಲ್ಕೂ ಕ್ಷೇತ್ರಗಳನ್ನು ನಮ್ಮ ಮೈತ್ರಿಕೂಟವೇ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.

