Wed. Oct 14th, 2026

ಕೈದಿಗಳ ಉತ್ಪನ್ನಗಳಿಗೆ ಆಧುನಿಕ ಮಾರುಕಟ್ಟೆ ಸ್ಪರ್ಶ: ಮಂಡಳಿ ಸ್ವಾವಲಂಬನೆಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

Share this with Friends

ಬೆಂಗಳೂರು: ರಾಜ್ಯದ ವಿವಿಧ ಜೈಲುಗಳಲ್ಲಿ ಕೈದಿಗಳು ಸಿದ್ಧಪಡಿಸುವ ವೈವಿಧ್ಯಮಯ ವಸ್ತುಗಳಿಗೆ ಆಧುನಿಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಮತ್ತು ಆಕರ್ಷಕ ಪ್ಯಾಕೇಜಿಂಗ್ ಮೂಲಕ ಅವುಗಳ ಮಾರಾಟ ಜಾಲವನ್ನು ವಿಸ್ತರಿಸಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ವಿಕಾಸಸೌಧದಲ್ಲಿ ಬುಧವಾರ ನಡೆದ ಕರ್ನಾಟಕ ಕಾರಾಗೃಹ ಅಭಿವೃದ್ಧಿ ಮಂಡಳಿಯ 5ನೇ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರಾಗೃಹ ಮಂಡಳಿಯು ಕೇವಲ ಅನುದಾನ ನೆಚ್ಚಿಕೊಳ್ಳದೆ, ಕೈದಿಗಳ ಶ್ರಮದ ಉತ್ಪನ್ನಗಳ ಮೂಲಕ ಸ್ವಾವಲಂಬನೆಯ ಹಾದಿ ಹಿಡಿಯಲು ಪೂರಕವಾದ ದೀರ್ಘಾವಧಿ ವಾಣಿಜ್ಯ ಯೋಜನೆಗಳನ್ನು ರೂಪಿಸಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಕೈದಿಗಳ ಮಾನಸಿಕ ಪರಿವರ್ತನೆ, ಕಲಾ ಚಿಕಿತ್ಸೆ ಮತ್ತು ಅವರಿಗೆ ಆಧುನಿಕ ವೃತ್ತಿಪರ ಕೌಶಲ್ಯ ತರಬೇತಿ ನೀಡುವುದು ಇಲಾಖೆಯ ಮುಖ್ಯ ಜವಾಬ್ದಾರಿಯಾಗಿದೆ. ಜೈಲಿನಿಂದ ಬಿಡುಗಡೆಯಾದ ನಂತರ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಈ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಸಹಕಾರಿಯಾಗಲಿದೆ. ಕೈದಿಗಳು ತಯಾರಿಸುವ ವಸ್ತುಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅವುಗಳನ್ನು ಗ್ರಾಹಕರಿಗೆ ತಲುಪಿಸಲು ಹೊಸ ಮಾರಾಟ ಮಳಿಗೆಗಳು ಹಾಗೂ ಇ-ಕಾಮರ್ಸ್ ತಾಣಗಳ ಬಳಕೆಯ ಸಾಧ್ಯತೆಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಇದರೊಂದಿಗೆ ಕಾರಾಗೃಹಗಳ ಒಳಗಿನ ಮೂಲಸೌಕರ್ಯ ವೃದ್ಧಿ ಮತ್ತು ವ್ಯಸನಮುಕ್ತ ಕೇಂದ್ರಗಳ ಸ್ಥಾಪನೆಗೆ ಆದ್ಯತೆ ನೀಡುವಂತೆ ತಿಳಿಸಲಾಯಿತು.

ಸಭೆಗೆ ಗೈರಾದ ಇಲಾಖಾ ಮುಖ್ಯಸ್ಥರ ವಿರುದ್ಧ ಸಚಿವರ ತೀವ್ರ ಆಕ್ರೋಶ

ಕಾರಾಗೃಹ ಅಭಿವೃದ್ಧಿ ಮಂಡಳಿಯ ಈ ಪ್ರಮುಖ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕಿದ್ದ ಕೃಷಿ, ತೋಟಗಾರಿಕೆ, ಆರೋಗ್ಯ, ಪಶುಸಂಗೋಪನೆ ಮತ್ತು ಕೈಗಾರಿಕಾ ಇಲಾಖೆಯ ಮುಖ್ಯಸ್ಥರು ಸ್ವತಃ ಬರದೆ ಕಿರಿಯ ಅಧಿಕಾರಿಗಳನ್ನು ಪ್ರತಿನಿಧಿಗಳಾಗಿ ಕಳುಹಿಸಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖಾ ಸಭೆಗಳ ಗಂಭೀರತೆಯನ್ನು ಅರಿಯದೆ ಬೇಜವಾಬ್ದಾರಿತನ ಪ್ರದರ್ಶಿಸಿದ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಸ್ಥಳದಲ್ಲಿದ್ದ ಕಿರಿಯ ಅಧಿಕಾರಿಗಳನ್ನು ಸಭೆಯಿಂದ ತಕ್ಷಣವೇ ಹೊರಕ್ಕೆ ಕಳುಹಿಸಿದರು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಇಂತಹ ವೇದಿಕೆಗಳಿಗೆ ಇಲಾಖಾ ಮುಖ್ಯಸ್ಥರೇ ಖುದ್ದು ಹಾಜರಿರಬೇಕು ಎಂದು ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎ. ಸಲೀಂ ಮತ್ತು ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.

 

 

 


Share this with Friends

Related Post