Fri. Oct 16th, 2026

ಸ್ಟಿಂಗ್ ಆಪರೇಷನ್ ಪ್ರಕರಣ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

Share this with Friends

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಆಪಾದಿತ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಸುದೀರ್ಘ ಹಾಗೂ ಪ್ರಖರವಾದ ರಾಜಕೀಯ ಸಮರ ಸಾರಿದ್ದಾರೆ.

ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿ ಹಾಗೂ ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಸರಣಿ ಮಾಧ್ಯಮಗೋಷ್ಠಿಗಳನ್ನು ನಡೆಸಿದ ಅವರು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ  ಸ್ಫೋಟಕ ಆರೋಪಗಳ ಸುರಿಮಳೆಗೈದಿದ್ದಾರೆ.

ಸ್ಟಿಂಗ್ ಆಪರೇಷನ್ ಸಂಚಿನ ಹಿಂದೆ ಖರ್ಗೆ ಕುಟುಂಬ ಮತ್ತು ಜಮೀರ್ ಕೈವಾಡ?:

ಮಾಜಿ ಮುಖ್ಯಮಂತ್ರಿಗಳ ವಿರುದ್ಧ ನಡೆದಿರುವ ರಹಸ್ಯ ವಿಡಿಯೋ ಬಿಡುಗಡೆಯ ಹಿಂದೆ ಆಡಳಿತ ಪಕ್ಷದ ಒಳಗಿನ ಆಂತರಿಕ ಭಿನ್ನಾಭಿಪ್ರಾಯಗಳೇ ಮೂಲ ಕಾರಣ ಎಂದು ಕುಮಾರಸ್ವಾಮಿ ವಿಶ್ಲೇಷಿಸಿದ್ದಾರೆ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದರೆ ತಮಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ, ಪ್ರಿಯಾಂಕ್ ಖರ್ಗೆ ಅವರು ದೆಹಲಿಯಲ್ಲಿರುವ ತಮ್ಮ ತಂದೆಯವರ (ಮಲ್ಲಿಕಾರ್ಜುನ ಖರ್ಗೆ) ಜೊತೆ ಸೇರಿ ಮುಖ್ಯಮಂತ್ರಿಗಳ ಪದಚ್ಯುತಿಗೆ ಈ ದೊಡ್ಡ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಮತ್ತೊಂದು ಬಾಂಬ್ ಸಿಡಿಸಿದ ಅವರು, ಹಿಂದೆ ಜಮೀರ್ ಅಹ್ಮದ್ ಖಾನ್ ಅವರಿಗೆ ಮಂತ್ರಿ ಸ್ಥಾನ ನೀಡಬಾರದು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರಿಂದ ಮುನಿಸಿಕೊಂಡು, ಅವರೇ ಪ್ರತಿಕಾರವಾಗಿ ಈ ವಿಡಿಯೋ ಬಿಡುಗಡೆ ಮಾಡಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.

ಗೃಹ ಇಲಾಖೆ ನಿಮ್ಮಪ್ಪನ ಜಹಗೀರಾ? ಖರ್ಗೆ ಹುದ್ದೆಗೆ ನಾಲಾಯಕ್:

ತಮ್ಮನ್ನು ಮತ್ತು ಜೆಡಿಎಸ್ ಕಾರ್ಯಕರ್ತರನ್ನು ವಿಚಾರಣೆಗೆ ಒಳಪಡಿಸುವುದಾಗಿ ಹೇಳಿಕೆ ನೀಡಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಏಕವಚನದಲ್ಲೇ ನೇರ ಸವಾಲು ಹಾಕಿದ ಹೆಚ್‌ಡಿಕೆ, “ಬ್ಲಾಕ್ ಮೇಲ್ ಮಾಡುವ ದುಷ್ಟರಿಗೆ ರಕ್ಷಣೆ ಕೊಡಲು ಗೃಹ ಇಲಾಖೆ ಏನು ನಿಮ್ಮಪ್ಪ ನಿಮಗೆ ಕೊಟ್ಟ ಬಳುವಳಿಯಲ್ಲ. ನಾನೇನು ನಿಮ್ಮಪ್ಪನ ಗಂಟು ತಿಂದಿದ್ದೀನಾ? ಬಂದು ನನ್ನನ್ನು, ನನ್ನ ಹುಡುಗರನ್ನು ಮುಟ್ಟಿ ನೋಡಿ, ಆಮೇಲೆ ಏನಾಗುತ್ತದೆ ಎಂದು ತೋರಿಸುತ್ತೇವೆ” ಎಂದು ಗುಡುಗಿದರು.

ಮಾಜಿ ಮುಖ್ಯಮಂತ್ರಿಗಳನ್ನು ಟ್ರ್ಯಾಪ್ ಮಾಡಿದ ಅಸಲಿ ಕಿರಾತಕ ರಾಕೇಶ್ ಶೆಟ್ಟಿ ಎಂಬಾತನನ್ನು ಬಂಧಿಸಲು ಯೋಗ್ಯತೆ ಇಲ್ಲದ ಪ್ರಿಯಾಂಕ್ ಖರ್ಗೆ ಗೃಹಮಂತ್ರಿ ಹುದ್ದೆಗೆ ತೀರಾ ನಾಲಾಯಕ್ ಎಂದ ಅವರು, ಗೃಹ ಸಚಿವರೇ ಈ ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಗಂಭೀರವಾಗಿ ಆಪಾದಿಸಿದರು.

‘ಬಲಿತ ದಲಿತರೇ’ ಮೀಸಲು ಕ್ಷೇತ್ರ ಬಿಟ್ಟು ಬನ್ನಿ:

ಮೀಸಲಾತಿ ರಾಜಕಾರಣದ ಕುರಿತು ಖರ್ಗೆ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, “ಸಿದ್ದಾರ್ಥ ಹಾಗೂ ಡಾ. ಅಂಬೇಡ್ಕರ್ ಹೆಸರಿನಲ್ಲಿ ಲೂಟಿ ಮೇಲೆ ಲೂಟಿ ಮಾಡಿದ ಬಲಿತ ದಲಿತನೇ, ನಿಮಗೆ ಮತ್ತು ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಧೈರ್ಯವಿದ್ದರೆ ನಿಮ್ಮ ಮೀಸಲು ಕ್ಷೇತ್ರವನ್ನು ಬೇರೆ ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು, ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬನ್ನಿ” ಎಂದು ಬಹಿರಂಗ ಸವಾಲು ಹಾಕಿದರು. ಅಲ್ಲದೆ, ಪ್ರಿಯಾಂಕ್ ಖರ್ಗೆ ಹಿಂದೆ ಪಂಚಾಯತ್ ರಾಜ್ ಸಚಿವರಾಗಿದ್ದಾಗ 24 ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗಳ (AEE) ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ದಾಖಲೆಗಳನ್ನು ಪ್ರಸ್ತಾಪಿಸಿ, ಈ ಬಗ್ಗೆ ಇವತ್ತಿನವರೆಗೂ ಏಕೆ ತುಟಿ ಬಿಚ್ಚಿಲ್ಲ ಎಂದು ಪ್ರಶ್ನಿಸಿದರು.

ಖೆಡ್ಡಾಕ್ಕೆ ಬೀಳಿಸಲು ನಾನು ರೇವಣ್ಣ ಅಲ್ಲ; ನ್ಯಾಯಾಂಗ ತನಿಖೆಗೆ ಮುಕ್ತ ಸವಾಲು:

ಸಿಎಂ ಡಿ.ಕೆ. ಶಿವಕುಮಾರ್ ತಂತ್ರಗಳಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ, “ನನ್ನನ್ನು ಸುಲಭವಾಗಿ ರಾಜಕೀಯ ಪಿತೂರಿಗೆ ಬಲಿ ಮಾಡಲು ನಾನೇನು ಹೆಚ್.ಡಿ. ರೇವಣ್ಣ ಅಲ್ಲಪ್ಪ, ನಾನು ಕುಮಾರಸ್ವಾಮಿ! ಇಂತಹ ಸಂಚುಗಳಿಗೆ ಹೇಗೆ ಚೆಕ್‌ಮೇಟ್ ಇಡಬೇಕು ಎನ್ನುವುದು ನನಗೂ ಚೆನ್ನಾಗಿ ಗೊತ್ತಿದೆ” ಎಂದರು.

ಪ್ರಿಯಾಂಕ್ ಖರ್ಗೆ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ತಾಕತ್ತಿದ್ದರೆ, ಈ ಇಡೀ ಪ್ರಕರಣವನ್ನು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಿಸಲಿ ಎಂದು ಸವಾಲೆಸೆದರು. ತಪ್ಪು ಮಾಡದಿದ್ದರೆ ಸಿದ್ದರಾಮಯ್ಯ ಅವರು ಸ್ಟಿಂಗ್ ವಿಡಿಯೋ ಪ್ರಸಾರಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ (Stay) ತರುವ ಅಗತ್ಯವೇನಿತ್ತು ಎಂದು ಕುಟುಕಿದ ಅವರು, ಇಂತಹ ಯಾವುದೇ ಸುಳ್ಳು ಪ್ರಕರಣಗಳಿಗೆ ತಾವು ಜಗ್ಗುವುದಿಲ್ಲ ಮತ್ತು ಯಾವುದೇ ರೀತಿಯ ತನಿಖೆಯನ್ನು ಎದುರಿಸಲು ಸಿದ್ಧರಿರುವುದಾಗಿ ಸ್ಪಷ್ಟಪಡಿಸಿದರು.

 

 


Share this with Friends

Related Post