ಬೆಂಗಳೂರು:ರಾಜ್ಯದಲ್ಲಿ ಆಸ್ತಿ ಮಾಲೀಕತ್ವ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸ್ಪಷ್ಟತೆ, ಅನುಕೂಲತೆ ಹಾಗೂ ಕಂದಾಯ ಇಲಾಖೆಯ ಸೇವೆಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ಸುಲಭವಾಗಿ ಪಡೆಯುವ ನಿಟ್ಟಿನಲ್ಲಿ ಸರ್ಕಾರ ಮತ್ತೊಂದು ಮಹತ್ವದ ತಾಂತ್ರಿಕ ಹೆಜ್ಜೆ ಇಟ್ಟಿದೆ. ಈ ಸಂಬಂಧ ಜಿಬಿಎ ಸಚಿವ ಕೃಷ್ಣ ಬೈರೇಗೌಡ ಈ ಮಹತ್ವದ ಸುಧಾರಣೆಯನ್ನು ಪ್ರಕಟಿಸಿದ್ದಾರೆ,
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಇ-ಆಸ್ತಿ 2.0 (e-Aasthi 2.0) ತಂತ್ರಾಂಶದ ಅಡಿಯಲ್ಲಿ ಜಂಟಿ ಆಸ್ತಿ ಹೊಂದಿರುವವರಿಗಾಗಿ “ನಿವೇಶನ ಉಪ-ವಿಭಜನೆ” (Site Sub-division) ಎಂಬ ವಿನೂತನ ಡಿಜಿಟಲ್ ಸೇವೆಯನ್ನು ಅಧಿಕೃತವಾಗಿ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಮನೆ ಬಾಗಿಲಿಗೆ ಆನ್ಲೈನ್ ಇ-ಖಾತಾ ಸೌಲಭ್ಯ:
ಸಾಮಾನ್ಯವಾಗಿ ಜಂಟಿ ಖಾತೆ ಅಥವಾ ಹಂಚಿಕೆಯಾಗದ ಆಸ್ತಿಗಳನ್ನು ಹೊಂದಿರುವ ಮಾಲೀಕರು ತಮ್ಮ ಪಾಲಿನ ಜಾಗವನ್ನು ಪ್ರತ್ಯೇಕಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾದ ಪರಿಸ್ಥಿತಿ ಇತ್ತು. ಆದರೆ, ಈ ಹೊಸ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಇನ್ಮುಂದೆ ಜಂಟಿ ಆಸ್ತಿ ಮಾಲೀಕರು ತಮ್ಮ ಪಾಲಿನ ಅನುಪಾತಕ್ಕೆ (Share ratio) ತಕ್ಕಂತೆ ಆಸ್ತಿಯನ್ನು ಕಾನೂನಾತ್ಮಕವಾಗಿ ವಿಭಜಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ, ವಿಭಜನೆಯಾದ ತಮ್ಮ ಹಕ್ಕಿನ ಜಾಗಕ್ಕೆ ಪ್ರತ್ಯೇಕವಾದ ‘ಎ-ಇ-ಖಾತಾ’ (A e-Khata) ಪತ್ರಗಳನ್ನು ಯಾವುದೇ ಕಚೇರಿಗಳಿಗೆ ಭೇಟಿ ನೀಡದೆ ನೇರವಾಗಿ ಆನ್ಲೈನ್ ಮೂಲಕವೇ ಪಡೆದುಕೊಳ್ಳಲು ಈ ತಂತ್ರಾಂಶದಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು.
ಜನಸ್ನೇಹಿ ಆಡಳಿತಕ್ಕೆ ಮುನ್ನುಡಿ:
“ಯಾವುದೇ ಒಬ್ಬ ನಾಗರಿಕನಿಗೆ ತನ್ನ ಆಸ್ತಿಯ ಮಾಲೀಕತ್ವದ ವಿಷಯದಲ್ಲಿ ಸಂಪೂರ್ಣ ಸ್ಪಷ್ಟತೆ ಇರಬೇಕು. ಸರ್ಕಾರದ ಸೇವೆಗಳು ಸುಲಭವಾಗಿ ಜನಸಾಮಾನ್ಯರ ಕೈಗೆಟುಕುವಂತಾಗಬೇಕು. ಕಂದಾಯ ಇಲಾಖೆಯ ನಾಗರಿಕ ಸೇವೆಗಳನ್ನು ಮತ್ತಷ್ಟು ಸರಳಗೊಳಿಸುವ ಮತ್ತು ತಂತ್ರಜ್ಞಾನದ ನೆರವಿನೊಂದಿಗೆ ಪಾರದರ್ಶಕತೆಯನ್ನು ತರುವ ನಮ್ಮ ನಿರಂತರ ಪ್ರಯತ್ನದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನರಿಗೆ ಸುಲಭವಾಗಿ ಸೇವೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಇದೊಂದು ಮತ್ತೊಂದು ಅತ್ಯಂತ ಮಹತ್ವದ ಮೈಲಿಗಲ್ಲು,” ಎಂದು ತಿಳಿಸಿದರು. ಇಲಾಖೆಯ ಈ ಡಿಜಿಟಲ್ ಕ್ರಾಂತಿಯಿಂದಾಗಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಆಸ್ತಿ ನೋಂದಣಿ ಮತ್ತು ಖಾತಾ ಬದಲಾವಣೆ ಪ್ರಕ್ರಿಯೆಗಳು ಇನ್ನುಮುಂದೆ ಮತ್ತಷ್ಟು ವೇಗ ಪಡೆದುಕೊಳ್ಳಲಿವೆ ಎಂದರು.

