ಬೆಂಗಳೂರು.ಮಾ.21: ಶೋಭಾ ಕರಂದ್ಲಾಜೆ ಅವರ ಹೇಳಿಕೆಗಳಿಂದಾಗಿ ಖುದ್ದು ತನಗೆ ಕ್ಷೇತ್ರದಲ್ಲಿ ಓಡಾಡಲು ಭಯವಾಗುತ್ತಿದೆ, ಯಾವ ಸಮಯದಲ್ಲಿ ಏನು ನಡೆಯಲಿದೆಯೋ ಅಂತ ಆತಂಕ ಶುರುವಾಗಿದೆ ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.
ಇಂದು ಶಿವರಾಂ ಹೆಬ್ಬಾರ್ ಅವರೊಂದಿಗೆ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸೋಮಶೇಖರ್, ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಬೆಂಕಿಯುಗುಳಿದರು.
ತಾನು 10 ವರ್ಷಗಳಿಂದ ಶಾಸಕ ಮತ್ತು ಮಂತ್ರಿಯಾಗಿ ಬೆಂಗಳೂರು ಉತ್ತರ ಕ್ಷೇತ್ರದ ಭಾಗವಾಗಿರುವ ಯಶವಂತಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳಿದ ಸೋಮಶೇಖರ್, ಈ ಎಲ್ಲ ಅವಧಿಯಲ್ಲಿ ಒಂದೇ ಗಲಭೆ ನಡೆದಿಲ್ಲ, ಆದರೆ ಈ ಸಲ ಟಿಕೆಟ್ ಗಿಟ್ಟಿಸಿರುವ ಶೋಭಾ ಕರಂದ್ಲಾಜೆ ಅಲ್ಲಿಂದ ಗೆಲ್ಲುವ ಮೊದಲೇ ಅಸಂಬದ್ಧ ಮತ್ತು ಮತೀಯ ಗಲಾಟೆಗಳಿಗೆ ಉತ್ತೇಜನ ನೀಡುವ ಹೇಳಿಕೆ ನೀಡುತ್ತಿದ್ದಾರೆ. ಬೆಂಗಳೂರು ಒಂದು ಶಾಂತಿಪ್ರಿಯ ನಗರವೆನ್ನುವುದನ್ನು ಶೋಭಾ ಮನಗಾಣಬೇಕು ಎಂದು ಅವರು ಹೇಳಿದರು.
ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ :
ಶಾಸಕರಾದ ಎಸ್.ಟಿ. ಸೋಮ ಶೇಖರ್ ಮತ್ತು ಶಿವರಾಂ ಹೆಬ್ಬಾರ್ ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ್ದಾರೆ.ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ಈ ಇಬ್ಬರ ನಾಯಕರ ಭೇಟಿ ಕುತೂಹಲ ಕೆರಳಿಸಿದೆ.
ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಕೇನ್ ಪರವಾಗಿ ಮತ ಹಾಕುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ. ಅತ್ತ ಶಿವರಾಂ ಹೆಬ್ಬಾರ್ ಪಕ್ಷದ ನಾಯಕರ ಸೂಚನೆಯನ್ನು ಕ್ಕರಿಸಿ ಗೈರು ಹಾಜರಾಗಿದ್ದರು. ಇಬ್ಬರೂ ಶಾಸಕರು ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ವದಂತಿಗಳು ಪದೇಪದೇ ಕೇಳಿಬರುತ್ತಲೇ ಇವೆ. ಆದರೆ ಅವರು ಬಿಜೆಪಿಯಲ್ಲೇ ಉಳಿದುಕೊಂಡಿದ್ದಾರೆ.