ನವದೆಹಲಿ: ನಾಗಪುರದಲ್ಲಿ ನಡೆದ ಆರ್ಎಸ್ಎಸ್ ಶತಾಬ್ಬಿ ವರ್ಷದ ವಿಜಯದಶಮಿ ಉತ್ಸವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಜಗತ್ತಿನ ಹಾಗೂ ದೇಶದ ಪ್ರಸ್ತುತ ವಿದ್ಯಮಾನಗಳ ಕುರಿತು ಪ್ರಸ್ತಾಪಿಸಿದ ವಿಚಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮೋಹನ್ ಭಾಗವತ್ ಅವರ ಈ ದಿಕ್ಸೂಚಿ ಭಾಷಣವು ಅತ್ಯಂತ ಸ್ಪೂರ್ತಿದಾಯಕವಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, “ನಾಗಪುರದಲ್ಲಿ ನಡೆದ ಶತಾಬ್ಬಿ ವರ್ಷದ ಶ್ರೀ ವಿಜಯದಶಮಿ ಉತ್ಸವದಲ್ಲಿ ಪರಮ ಪೂಜ್ಯ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಜೀ ಅವರು ಅತ್ಯಂತ ಸ್ಪೂರ್ತಿದಾಯಕವಾದ ಭಾಷಣವನ್ನು ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
ಸಾಮಾಜಿಕ ಬದಲಾವಣೆಗೆ ಪೂರಕ:
“ಸರಸಂಘಚಾಲಕರು ತಮ್ಮ ಭಾಷಣದಲ್ಲಿ ದೇಶದ ಪ್ರಗತಿ, ಸಾಮಾಜಿಕ ಏಕತೆ, ಸ್ವಾವಲಂಬನೆಯ ಅಗತ್ಯತೆ ಮತ್ತು ಸಮಾಜದ ಚಾರಿತ್ರ್ಯವನ್ನು ಬಲಪಡಿಸುವ ಕುರಿತು ವ್ಯಾಪಕವಾದ ವಿಷಯಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಅದರಲ್ಲೂ ವಿಶೇಷವಾಗಿ, ಪ್ರತಿಯೊಬ್ಬ ಆರ್ಎಸ್ಎಸ್ ಸ್ವಯಂಸೇವಕರ ಅವಿಭಾಜ್ಯ ಅಂಗವಾಗಿರುವ ಸೇವಾ ಮನೋಭಾವ ಮತ್ತು ರಾಷ್ಟ್ರ ನಿರ್ಮಾಣದ ಬದ್ಧತೆಗೆ ಅವರು ನೀಡಿರುವ ಒತ್ತು ಅತ್ಯಂತ ಗಮನಾರ್ಹವಾದುದಾಗಿದೆ. ಇದರೊಂದಿಗೆ ಅವರು ಪ್ರಸ್ತಾಪಿಸಿದ ‘ಪಂಚ ಪರಿವರ್ತನೆ’ ತತ್ವಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಹೇಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಬಲ್ಲವು ಎಂಬುದನ್ನು ಅವರು ವಿವರಿಸಿದ್ದಾರೆ” ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

