Tue. Oct 20th, 2026

ಪಥಸಂಚಲನಕ್ಕೆ ಅಧಿಕೃತ ಅನುಮತಿ ಪಡೆಯಬೇಕು: ಆರ್‌ಎಸ್‌ಎಸ್‌ಗೆ ಗೃಹಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

Share this with Friends

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್ಎಸ್) ಪಥಸಂಚಲನಕ್ಕೆ (Route March) ಸಂಬಂಧಿಸಿದಂತೆ ಗೃಹ ಇಲಾಖೆಗೆ ಕೇವಲ ‘ಮಾಹಿತಿ’ ನೀಡುವುದು ಅಥವಾ ‘ಸಹಕರಿಸುವಂತೆ’ ಕೋರುವುದು ಅಧಿಕೃತ ಅನುಮತಿ ಪಡೆದಂತೆ ಆಗುವುದಿಲ್ಲ. ಎಲ್ಲಾ ಸಂಘಟನೆಗಳಂತೆ ನಿಗದಿತ ನಿಯಮಾವಳಿಗಳ ಪ್ರಕಾರವೇ ಅರ್ಜಿ ಸಲ್ಲಿಸಿ, ಸಕ್ಷಮ ಪ್ರಾಧಿಕಾರದಿಂದ ಔಪಚಾರಿಕ ಅನುಮತಿಗಾಗಿ ಕಾಯಬೇಕು ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್‌ಗೆ ತಾಕೀತು ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿವರು, ಆರ್‌ಎಸ್‌ಎಸ್ ಸ್ವಯಂಸೇವಕರಿಗೆ ದಸರಾ ಹಬ್ಬದ ಶುಭಾಶಯ ಕೋರುತ್ತಲೇ ಕಾನೂನು ಪ್ರಕ್ರಿಯೆಗಳನ್ನು ನೆನಪಿಸಿದ್ದಾರೆ.

ಪೊಲೀಸ್ ಇಲಾಖೆಗೆ ಮುನ್ನೆಚ್ಚರಿಕೆ ಅಗತ್ಯ:

ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯ 2025-26ರ ವಾರ್ಷಿಕ ವರದಿಯನ್ನೇ ಉಲ್ಲೇಖಿಸಿರುವ ಪ್ರಿಯಾಂಕ್ ಖರ್ಗೆ, “ನಿಮ್ಮದೇ ವರದಿಯ ಪ್ರಕಾರ ಆರ್‌ಎಸ್‌ಎಸ್ ಕರ್ನಾಟಕದಾದ್ಯಂತ 562 ರೂಟ್ ಮಾರ್ಚ್‌ಗಳನ್ನು ನಡೆಸಿದ್ದು, ಇದರಲ್ಲಿ ಸಮವಸ್ತ್ರ ಧರಿಸಿದ 2,21,963 ಮಂದಿ ಭಾಗವಹಿಸಿದ್ದರು. ಈಗ ಇಷ್ಟೊಂದು ಲಕ್ಷಾಂತರ ಸಂಖ್ಯೆಯ ಜನರು ಕರ್ನಾಟಕದ ರಸ್ತೆಗಳಲ್ಲಿ ಒಂದೇ ದಿನ, ಒಂದೇ ಸಮಯದಲ್ಲಿ ಪಥಸಂಚಲನ ನಡೆಸಲು ಉದ್ದೇಶಿಸಿದಾಗ ಪೊಲೀಸ್ ಇಲಾಖೆಯು ಭಾರಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ” ಎಂದು ವಿವರಿಸಿದ್ದಾರೆ.

ಸಾರ್ವಜನಿಕ ಸಂಪನ್ಮೂಲಗಳ ಬಳಕೆ:

“ಸಿಬ್ಬಂದಿ ನಿಯೋಜನೆ, ಸಾರಿಗೆ, ಆಹಾರದ ವ್ಯವಸ್ಥೆ, ಸಂಚಾರ ನಿಯಂತ್ರಣ (Traffic Management), ಬಿಗಿ ಭದ್ರತೆ ಹಾಗೂ ಇತರ ಲಾಜಿಸ್ಟಿಕ್ಸ್ ಸಿದ್ಧತೆಗಳನ್ನು ಪೊಲೀಸ್ ಇಲಾಖೆ ಮಾಡಬೇಕಾಗುತ್ತದೆ. ಇವೆಲ್ಲದಕ್ಕೂ ಸೂಕ್ತ ಯೋಜನೆ, ಮಾನವ ಶಕ್ತಿ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಅಗತ್ಯವಿರುತ್ತದೆ. ಆದ್ದರಿಂದ, ದಯವಿಟ್ಟು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯವಿರುವ ಎಲ್ಲಾ ವಿವರಗಳನ್ನು ಒದಗಿಸಿ ಅಧಿಕೃತ ಅನುಮತಿಗಾಗಿ ಕಾಯಬೇಕು” ಎಂದು ಗೃಹಸಚಿವರು ತಮ್ಮ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

 


Share this with Friends

Related Post