Thu. Oct 22nd, 2026

ಬೆಂಗಳೂರಿನಲ್ಲಿ ನಡುರಾತ್ರಿ ನಿಯಮ ಬಾಹಿರ ಪಟಾಕಿ, ಅಬ್ಬರದ ಸಂಗೀತ: ಪೋಲೀಸ್ ಕಮಿಷನರ್, ಗೃಹಸಚಿವರಿಗೆ ನಟಿ ರಮ್ಯಾ ದೂರು

Share this with Friends

ಬೆಂಗಳೂರು: ಹಬ್ಬ ಹಾಗೂ ಮೆರವಣಿಗೆಗಳ ಹೆಸರಿನಲ್ಲಿ ಮಧ್ಯರಾತ್ರಿಯ ನಂತರವೂ ನಿಯಮ ಬಾಹಿರವಾಗಿ ಅಬ್ಬರದ ಸಿನೆಮಾ ಹಾಡುಗಳನ್ನು ಹಾಕುವುದು ಮತ್ತು ಪಟಾಕಿ ಸಿಡಿಸುವುದರ ವಿರುದ್ಧ ಸ್ಯಾಂಡಲ್‌ವುಡ್ ನಟಿ ರಮ್ಯಾ (ದಿವ್ಯ ಸ್ಪಂದನಾ) ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಅವರು ನಗರ ಪೊಲೀಸ್ ಕಮಿಷನರ್ ಹಾಗೂ ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ.

ನಗರದ ಫನ್ ವರ್ಲ್ಡ್ ಭಾಗದಲ್ಲಿ ನಡೆದ ಮೆರವಣಿಗೆಯೊಂದರಲ್ಲಿ ಬೆಳಗಿನ ಜಾವ 6 ಗಂಟೆಯವರೆಗೂ ಅಬ್ಬರದ ಮ್ಯೂಸಿಕ್ ಹಾಗೂ ಪಟಾಕಿ ಸದ್ದು ಮುಂದುವರಿದಿದ್ದ ಹಿನ್ನೆಲೆಯಲ್ಲಿ ನಟಿ ರಮ್ಯಾ ಅವರು ಸಾಮಾಜಿಕ ಜಾಲತಾಣವಾದ ‘ಎಕ್ಸ್’ (ಟ್ವಿಟರ್) ನಲ್ಲಿ ಸರಣಿ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ನಾಗರಿಕರ ಪರವಾಗಿ ಧ್ವನಿ ಎತ್ತಿದ್ದಾರೆ.

ನಟಿ ರಮ್ಯಾ ಅವರ ಪೋಸ್ಟ್‌ನ ಸಾರಾಂಶ:

“ಈ ಗದ್ದಲ ಬೆಳಗಿನ ಜಾವ 6 ಗಂಟೆಯವರೆಗೂ ಮುಂದುವರಿದಿತ್ತು. ದಯವಿಟ್ಟು ಇಂತಹ ಮೆರವಣಿಗೆಗಳಲ್ಲಿ ತಡರಾತ್ರಿ ಅಬ್ಬರದ ಫಿಲ್ಮಿ ಹಾಡುಗಳನ್ನು ಹಾಕುವುದು ಮತ್ತು ಪಟಾಕಿ ಸಿಡಿಸುವುದನ್ನು ನಿಲ್ಲಿಸಿ. ನಾವೆಲ್ಲರೂ ಕಾನೂನಿಗೆ ಗೌರವ ನೀಡಬೇಕು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ರಾತ್ರಿ 10 ಗಂಟೆಯ ನಂತರ ಪಟಾಕಿ ಸಿಡಿಸುವಂತಿಲ್ಲ ಹಾಗೂ ಮಧ್ಯರಾತ್ರಿ 12 ಗಂಟೆಯ ನಂತರ ಲೌಡ್ ಸ್ಪೀಕರ್ ಬಳಸುವಂತಿಲ್ಲ. ಆಸ್ಪತ್ರೆಗಳು, ಹಿರಿಯ ನಾಗರಿಕರು ಸುತ್ತಮುತ್ತ ಇರುತ್ತಾರೆ ಎಂಬುದನ್ನು ಗಮನಿಸಬೇಕು.”

“ಇಂದು ಕಚೇರಿಗಳು ಹಾಗೂ ಶಾಲೆಗಳು ಪುನರಾರಂಭಗೊಳ್ಳುವ ದಿನವಾಗಿದ್ದು, ದುಡಿಯುವ ವರ್ಗದ ಜನರಿಗೆ ಹಾಗೂ ಮಕ್ಕಳಿಗೆ ಇದರಿಂದ ಭಾರಿ ತೊಂದರೆಯಾಗಿದೆ. ನಾನು ರಾತ್ರಿ 2:30ಕ್ಕೆ 112 ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದೇನೆ. ಅಷ್ಟೇ ಅಲ್ಲದೆ, ನಗರ ಪೊಲೀಸ್ ಕಮಿಷನರ್ ಹಾಗೂ ಗೃಹ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದೂರು ಸಲ್ಲಿಸಿದ್ದೇನೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ನಂಬಿದ್ದೇನೆ. ವಿಶೇಷ ಸಂದರ್ಭಗಳಲ್ಲಿ ನಿಯಮ ಸಡಿಲಿಕೆಯನ್ನು ನಾನು ಒಪ್ಪುತ್ತೇನೆ, ಆದರೆ ಇಂತಹ ಅಸಹಜ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ” ಎಂದು ರಮ್ಯಾ ಬರೆದುಕೊಂಡಿದ್ದಾರೆ.

ಕಾನೂನು ಉಲ್ಲಂಘನೆ ವಿರುದ್ಧ ಸಾರ್ವಜನಿಕರ ಬೆಂಬಲ:

ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ನಿಯಮಗಳಿದ್ದರೂ ಸಹ ವಸತಿ ಪ್ರದೇಶಗಳು ಮತ್ತು ಆಸ್ಪತ್ರೆಗಳಿರುವ ಜಾಗಗಳಲ್ಲಿ ಇಂತಹ ಧ್ವನಿವರ್ಧಕಗಳ ಬಳಕೆ ನಿಲ್ಲದಿರುವುದಕ್ಕೆ ರಮ್ಯಾ ಅವರ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರನ್ನು ಒತ್ತಾಯಿಸಲಾಗುತ್ತಿದೆ.

 


Share this with Friends

Related Post