Thu. Oct 22nd, 2026

ಮೈಸೂರು ದಸರಾ ಯಶಸ್ಸಿಗೆ ಸಿಎಂ ಡಿ.ಕೆ ಶಿವಕುಮಾರ್ ಶ್ಲಾಘನೆ

Share this with Friends

ಬೆಂಗಳೂರು: ಅಕ್ಟೋಬರ್ 26 ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಮಹತ್ವದ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಸದಾಶಿವನಗರದ ತಮ್ಮ ನಿವಾಸದ ಬಳಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡರು.

ಕಬ್ಬು ಬೆಳೆಗಾರರ ಸಮಸ್ಯೆ ದೇಶದ ವಿಚಾರ:

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾರಣಾಂತರಗಳಿಂದ ಈ ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿಸಿದ ಸಿಎಂ, “ಜೋಶಿಯವರು ಮೊದಲು ರಾಜ್ಯ ಮಟ್ಟದಲ್ಲಿ ಸಭೆ ಮುಗಿಸಲು ಸೂಚಿಸಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ ಇಡೀ ದೇಶಕ್ಕೆ ಸಂಬಂಧಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಮಟ್ಟದ ಅಧಿಕಾರಿಗಳ ಜೊತೆಗೂ ಪ್ರತ್ಯೇಕ ಸಭೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು” ಎಂದರು. ಇದೇ ವೇಳೆ ಅರಣ್ಯ ಭೂಮಿ ವಿವಾದಗಳ ಬಗೆಹರಿಸಲು ಕೇಂದ್ರ ಸಚಿವರನ್ನು ಭೇಟಿ ಮಾಡುವುದಾಗಿ ಅವರು ತಿಳಿಸಿದರು.

ಮಹದಾಯಿ, ತುಂಗಭದ್ರಾ ಮತ್ತು ಬರಗಾಲದ ಚರ್ಚೆ:

ಮಹದಾಯಿ ವಿವಾದ: ಗೋವಾದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಈ ಸಮಯದಲ್ಲಿ ಮಹದಾಯಿ ಕುರಿತು ತಕ್ಷಣದ ತೀರ್ಮಾನ ಕಷ್ಟವಾಗಬಹುದು ಎಂದು ಸಿಎಂ ಅಭಿಪ್ರಾಯಪಟ್ಟರು.

ತುಂಗಭದ್ರಾ ನೀರಿನ ಕೊರತೆ: ತುಂಗಭದ್ರಾ ಜಲಾಶಯದಲ್ಲಿ ತೀವ್ರ ನೀರಿನ ಕೊರತೆಯಿದ್ದು, ರೈತರಿಂದ ಬೇಡಿಕೆ ಹೆಚ್ಚಾಗಿದೆ. ಈ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಗಳನ್ನು ಆಂಧ್ರ ಅಥವಾ ದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಲು ಮನವಿ ಮಾಡಲಾಗಿದೆ.

ಬರಗಾಲದ ನೆರವು: ರಾಜ್ಯದ ಬರಗಾಲದ ಪರಿಸ್ಥಿತಿಯ ಕುರಿತು ಬೇಡಿಕೆಗಳನ್ನು ಸಲ್ಲಿಸಲು ಪ್ರಧಾನಮಂತ್ರಿ ಹಾಗೂ ಗೃಹಸಚಿವರ ಭೇಟಿಗೆ ಪ್ರತ್ಯೇಕ ತಂಡ ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪೋಲೆಂಡ್ ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ಇಂದೇ ರಾಜ್ಯಕ್ಕೆ ಮರಳಲಿದ್ದು, ಮತ್ತೊಂದು ದಿನ ದೆಹಲಿಗೆ ಭೇಟಿ ನೀಡುವುದಾಗಿ ಹೇಳಿದರು.

ವಿಶ್ವವಿಖ್ಯಾತ ಮೈಸೂರು ದಸರಾ ಯಶಸ್ಸು:

ಬುಧವಾರ ನಡೆದ ಮೈಸೂರು ದಸರಾ ಜಂಬೂಸವಾರಿ ಅತ್ಯಂತ ಯಶಸ್ವಿಯಾಗಿದೆ ಎಂದು ಸಿಎಂ ಹರ್ಷ ವ್ಯಕ್ತಪಡಿಸಿದರು. ಕೇರಳ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳು ಭೇಟಿ ನೀಡಿ ಪಂಜಿನ ಕವಾಯತು, ಸ್ತಬ್ಧಚಿತ್ರಗಳು ಹಾಗೂ ದಾಖಲೆ ಬರೆದ ಡ್ರೋಣ್ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಎಂದು ತಿಳಿಸಿದರು. ಸಚಿವರಾದ ಕೆ.ಜೆ. ಜಾರ್ಜ್, ಬಸವರಾಜ ರಾಯರೆಡ್ಡಿ, ಡಿಸಿಎಂ ಪರಮೇಶ್ವರ್ ಹಾಗೂ ಸಿನಿಮಾ ವಾಣಿಜ್ಯ ಮಂಡಳಿಯ ಜಯಮಾಲಾ, ರಾಕ್ ಲೈನ್ ವೆಂಕಟೇಶ್ ಮತ್ತು ಕೇಂದ್ರ ಸಂಸ್ಥೆಗಳ ಶ್ರಮಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ ಶಿವಮೊಗ್ಗ ದಸರಾ ಅವಘಡದ ಕುರಿತು ಪ್ರತಿಕ್ರಿಯಿಸಿ, “ಮೈಸೂರಿನಲ್ಲಿ ಮುನ್ನೆಚ್ಚರಿಕೆಯಾಗಿ ಸಭೆ ನಡೆಸಿ ಪ್ರಶಾಂತ ಆನೆಯನ್ನು ಅಂಬಾರಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಶಿವಮೊಗ್ಗದಲ್ಲಿ ಸ್ವಲ್ಪ ಯಾಮಾರಿದ್ದಾರೆ. ಇದು ನಮಗೆ ಎಚ್ಚರಿಕೆ ಘಂಟೆಯಾಗಿದ್ದು, ಮುಂದಿನ ಬಾರಿ ಹೆಚ್ಚಿನ ಜಾಗ್ರತೆ ವಹಿಸಲಾಗುವುದು” ಎಂದರು.

 

 


Share this with Friends

Related Post