Thu. Oct 22nd, 2026

ಮೇಕೆದಾಟು, ಶರಾವತಿ ಯೋಜನೆಗಳಿಗೆ ಅನುಮೋದನೆ ನೀಡಿ, ಕಸ್ತೂರಿರಂಗನ್ ವರದಿ ತಡೆ ನೀಡಿ: ಕೇಂದ್ರಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಮನವಿ

Share this with Friends

ನವದೆಹಲಿ: ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಗಳಾದ ಮೇಕೆದಾಟು ಕುಡಿಯುವ ನೀರಿನ ಯೋಜನೆ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ (SC-NBWL) ಶೀಘ್ರ ಅನುಮೋದನೆ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ದೆಹಲಿಯ ಪರಿಸರ ಭವನದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರನ್ನು ಗುರುವಾರ ಭೇಟಿ ಮಾಡಿದ ಸಿಎಂ, ರಾಜ್ಯದ ಪ್ರಮುಖ ಪರಿಸರ ಹಾಗೂ ಕೈಗಾರಿಕಾ ವಿಷಯಗಳ ಕುರಿತು ಚರ್ಚಿಸಿ ಅಧಿಕೃತ ಮನವಿ ಸಲ್ಲಿಸಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ:

ಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರಿನ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್’ (NIAS) ನೀಡಿರುವ ತಾಂತ್ರಿಕ ವರದಿ ಸೇರಿದಂತೆ ಸ್ಥಾಯಿ ಸಮಿತಿಯು ಎತ್ತಿದ್ದ ಎಲ್ಲಾ ಪ್ರಶ್ನೆಗಳಿಗೆ ಹಾಗೂ ತಾಂತ್ರಿಕ ಸಮಿತಿಯ ಸ್ಪಷ್ಟೀಕರಣಗಳಿಗೆ ಕರ್ನಾಟಕ ಸರ್ಕಾರವು ಸೂಕ್ತ ದಾಖಲೆಗಳೊಂದಿಗೆ ಈಗಾಗಲೇ ಕಟ್ಟುನಿಟ್ಟಿನ ಉತ್ತರಗಳನ್ನು ನೀಡಿದೆ. ಆದ್ದರಿಂದ ಈ ಪ್ರಸ್ತಾಪಕ್ಕೆ ತಕ್ಷಣವೇ ಚಾಲನೆ ನೀಡಬೇಕು ಎಂದು ಸಿಎಂ ವಿವರಿಸಿದರು.

ಮೇಕೆದಾಟು ಸಮತೋಲನ ಜಲಾಶಯ ಯೋಜನೆ:

ಕಾವೇರಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯ 0.0000352 ಹೆಕ್ಟೇರ್ ಪ್ರದೇಶದಲ್ಲಿ ಕೇವಲ ಭೂ-ತಾಂತ್ರಿಕ (Geo-technical) ಸಮೀಕ್ಷೆಗಾಗಿ 20 ಬೋರ್ ಹೋಲ್ ಕೊರೆಯಲು ಅನುಮತಿ ನೀಡುವಂತೆ ಕೋರಲಾಗಿದೆ. ಈ ಪ್ರಸ್ತಾಪವು ಕೇವಲ ಸಮೀಕ್ಷೆ ಮತ್ತು ತನಿಖಾ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿದ್ದು, ಯಾವುದೇ ಸಂರಕ್ಷಿತ ಅರಣ್ಯ ಭೂಮಿಯನ್ನು ಯೋಜನೆಗೆ ಬಳಸಿಕೊಳ್ಳುತ್ತಿಲ್ಲ (Diversion). ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿರುವ ಅರ್ಜಿಗಳ ಮಾಹಿತಿಯನ್ನು ಶೀಘ್ರದಲ್ಲೇ ಕೇಂದ್ರಕ್ಕೆ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಸ್ತೂರಿರಂಗನ್ ವರದಿ ಅಂತಿಮಗೊಳಿಸಬೇಡಿ:

ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಯನ್ನು ಸದ್ಯಕ್ಕೆ ಅಂತಿಮಗೊಳಿಸಬಾರದು ಎಂದು ಸಿಎಂ ಭೂಪೇಂದರ್ ಯಾದವ್ ಅವರಿಗೆ ಬಲವಾಗಿ ವಿನಂತಿಸಿದರು.

ರಾಜ್ಯ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ (HLC) ವರದಿ ಸಲ್ಲಿಕೆಯಾದ ನಂತರ, ಕನಿಷ್ಠ ಒಂದು ವರ್ಷದ ಅವಧಿಯಲ್ಲಿ ಭೌತಿಕ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಕರಡು ಅಧಿಸೂಚನೆಗೆ ತಡೆ ನೀಡಬೇಕು.

ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈಗಾಗಲೇ ಪತ್ರ ಬರೆಯಲಾಗಿದ್ದು, ರಾಜ್ಯ ಸರ್ಕಾರದ ಸಮಾಲೋಚನೆಯೊಂದಿಗೇ ಕೇಂದ್ರ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಸಕ್ಕರೆ ಕಾರ್ಖಾನೆಯನ್ನು ವಲಯದಿಂದ ಕೈಬಿಡಲು ಮನವಿ:

ಬೆಳಗಾವಿಯ ‘ಎಕೊ ಕೇನ್ ಶುಗರ್ ಅಂಡ್ ಎನರ್ಜಿ ಲಿ.’ ಸಕ್ಕರೆ ಕಾರ್ಖಾನೆಯು 2016 ಕ್ಕೂ ಮೊದಲೇ ಆರಂಭವಾಗಿರುವುದರಿಂದ ಅದನ್ನು ಪರಿಸರ ಸೂಕ್ಷ್ಮ ವಲಯದ (ESA) ವ್ಯಾಪ್ತಿಯಿಂದ ಕೈಬಿಡಬೇಕು. ಈ ಕಾರ್ಖಾನೆಯನ್ನು ಸುಮಾರು 500 ಕ್ಕೂ ಹೆಚ್ಚು ಕಾರ್ಮಿಕರು ಮತ್ತು 5000ಕ್ಕೂ ಹೆಚ್ಚು ರೈತ ಕುಟುಂಬಗಳು ಅವಲಂಬಿಸಿವೆ ಎಂದು ಸಿಎಂ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

 


Share this with Friends

Related Post