Thu. Oct 22nd, 2026

ಜಂಬೂ ಸವಾರಿ ವೀಕ್ಷಣೆ ವೇಳೆ ಬಾಲಕಿಗೆ ಲಾಠಿ ಏಟು: ಮೈಸೂರು ಪೊಲೀಸರಿಂದ ಪ್ರಕರಣ ದಾಖಲು, ತನಿಖೆ ಚುರುಕು

Share this with Friends

ಮೈಸೂರು: ದಸರಾ ಜಂಬೂ ಸವಾರಿ ಮೆರವಣಿಗೆ ವೀಕ್ಷಣೆ ಮಾಡುವಾಗ ಪೊಲೀಸ್ ಲಾಠಿ ತಗುಲಿ ಬಾಲಕಿಯೊಬ್ಬಳು ಗಾಯಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನುಬದ್ಧ ನಿಷ್ಪಕ್ಷಪಾತ ತನಿಖೆ ಆರಂಭವಾಗಿದೆ ಎಂದು ಮೈಸೂರು ನಗರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನಾಂಕ 21-10-2026 ರಂದು ಸಂಜೆ ಸುಮಾರು 04:30 ಗಂಟೆಗೆ ಜಂಬೂ ಸವಾರಿ ಮೆರವಣಿಗೆ ಸಾಗುತ್ತಿದ್ದ ವೇಳೆ ಹೈವೆ ವೃತ್ತದಲ್ಲಿ ಸಾರ್ವಜನಿಕರು ಹಾಗೂ ಮಕ್ಕಳು ಟ್ಯಾಬ್ಲೋಗಳನ್ನು ನೋಡುವ ಉತ್ಸಾಹದಲ್ಲಿ ಎದ್ದು ನಿಂತಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಪೊಲೀಸರು ಜನರನ್ನು ಕುಳಿತುಕೊಳ್ಳುವಂತೆ ಸೂಚಿಸಿ, ಬ್ಯಾರಿಕೇಡ್‌ಗೆ ಲಾಠಿಯಿಂದ ಬಡಿದಿದ್ದಾರೆ. ದುರದೃಷ್ಟವಶಾತ್ ಲಾಠಿಯ ತುದಿ ಸಹನಾಳ ಎಂಬಾಕೆಯ ಕಿವಿಗೆ ತಾಗಿ, ನಂತರ ಆಕೆಯ ಮಗಳ ತಲೆಗೆ ಬಿದ್ದಿದೆ. ಪರಿಣಾಮ ಬಾಲಕಿಯ ತಲೆಯಿಂದ ರಕ್ತ ಬಂದಿದ್ದು, ತಕ್ಷಣವೇ ಮಣಿಪಾಲ್ ಆಸ್ಪತ್ರೆಯ ಆಂಬ್ಯುಲೆನ್ಸ್ ಮೂಲಕ ಆಕೆಯನ್ನು ದಾಖಲಿಸಿ ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಕುರಿತು ಬಾಲಕಿಯ ತಂದೆಯಾದ ಹೆಚ್.ಕೆ. ನಾಗರಾಜು ಅವರು ನೀಡಿದ ದೂರಿನನ್ವಯ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪೊಲೀಸರ ತ್ವರಿತ ಸ್ಪಂದನೆ:

ಘಟನೆ ನಡೆದ ತಕ್ಷಣವೇ ಮೆರವಣಿಗೆ ಮಾರ್ಗದಲ್ಲಿದ್ದ ತುರ್ತು ಆಂಬ್ಯುಲೆನ್ಸ್ ಸಹಾಯದಿಂದ ಮಗುವನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಚಿಕಿತ್ಸೆ ಕುರಿತು ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಸದ್ಯ ಪೊಲೀಸರು ವೈದ್ಯರು ಹಾಗೂ ಮಗುವಿನ ಪೋಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನಿಖರ ಮಾಹಿತಿಯನ್ನು ಕಲೆಹಾಕಲಾಗುತ್ತಿದ್ದು, ಕಾನೂನು ನಿಯಮಾನುಸಾರ ನಿಷ್ಪಕ್ಷಪಾತ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ನಗರ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

 


Share this with Friends

Related Post