Tue. Oct 27th, 2026

ರೈತರು-ಕಾರ್ಖಾನೆ ಎರಡೂ ಉಳಿಯಬೇಕು: ಬೆಳಗಾವಿ ಸುವರ್ಣಸೌಧದಲ್ಲಿ ಬಿಕ್ಕಟ್ಟು ಶಮನ ಮಾಡಿದ ಡಿಕೆಶಿ ಪರಿಹಾರ ಸೂತ್ರ!

Share this with Friends

ಬೆಳಗಾವಿ: ರಾಜ್ಯದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ದರ ಸಮರ ಕೊನೆಗೂ ಸುಖಾಂತ್ಯ ಕಂಡಿದೆ. ಬೆಳಗಾವಿಯ ಸುವರ್ಣ ಸೌಧ ಮತ್ತು ಸರ್ಕಿಟ್ ಹೌಸ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಭಾನುವಾರ ನಡೆದ ಐದು ಸುತ್ತುಗಳ ಭಗೀರಥ ಪ್ರಯತ್ನದ ಸಭೆಯ ನಂತರ, ಮಧ್ಯರಾತ್ರಿ ವೇಳೆ ಉಭಯ ಬಣಗಳ ನಡುವೆ ಐತಿಹಾಸಿಕ ಸಂಧಾನ ಸೂತ್ರ ಯಶಸ್ವಿಯಾಗಿದೆ.

ಕೇಂದ್ರ ಸರ್ಕಾರವು ಕಬ್ಬಿನ ಕನಿಷ್ಠ ಮಾರಾಟ ದರ (MSP) ನಿಗದಿಪಡಿಸಿದ ತಕ್ಷಣವೇ, ಅದಕ್ಕೆ ಪ್ರತಿಯಾಗಿ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಅಂತಿಮ ದರವನ್ನು ಅಖೈರುಗೊಳಿಸಲು ನಿರ್ಧರಿಸಲಾಗಿದೆ. ಇನ್ನು ಕೇವಲ ಎರಡು ದಿನಗಳಲ್ಲಿ ರೈತ ಸಂಘಟನೆಗಳು ಹಾಗೂ ಕಾರ್ಖಾನೆ ಮಾಲೀಕರು ಜಂಟಿಯಾಗಿ ತಮ್ಮ ಅಂತಿಮ ತೀರ್ಮಾನವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

10 ತಾಸುಗಳ ಸುದೀರ್ಘ ಕಸರತ್ತು, ಪಟ್ಟುಬಿಡದ ಸಿಎಂ:

ಬೆಳಗ್ಗೆ 11 ಗಂಟೆಗೆ ಆರಂಭವಾದ ಸಭೆ ಮಧ್ಯರಾತ್ರಿಯವರೆಗೂ ಸರಿಸುಮಾರು 10 ಗಂಟೆಗಳ ಕಾಲ ಸರಣಿ ಸಭೆಯಾಗಿ ಮಾರ್ಪಟ್ಟಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಖುದ್ದಾಗಿ ಮುಂದೆ ನಿಂತು, ಉಭಯ ಬಣಗಳ ಹಠದ ನಡುವೆಯೂ ಬಿಕ್ಕಟ್ಟು ಶಮನಕ್ಕೆ ಪಟ್ಟು ಹಿಡಿದು ಯಶಸ್ವಿಯಾಗಿದ್ದಾರೆ. ಈ ಸುದೀರ್ಘ ಸಭೆಯಲ್ಲಿ 9 ಸಚಿವರು, 70 ಶಾಸಕರು ಹಾಗೂ ರಾಜ್ಯದ ಒಟ್ಟು 80 ಕಾರ್ಖಾನೆಗಳ ಪೈಕಿ 79 ಕಾರ್ಖಾನೆಗಳ ಮಾಲೀಕರು ಪಾಲ್ಗೊಂಡು ಮುಕ್ತ ಚರ್ಚೆ ನಡೆಸಿದರು.

ಕೇಂದ್ರದ ದರ ನಿಗದಿಯೇ ಅಂತಿಮ ಸೂತ್ರ:

ಸಂಧಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, “ರೈತರು ಈಗಾಗಲೇ ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದು, ಕೇಂದ್ರದ ಭರವಸೆಯ ಮೇಲೆ ನಂಬಿಕೆಯಿಟ್ಟಿದ್ದಾರೆ. ಕೇಂದ್ರ ಸರ್ಕಾರ ಎಂಎಸ್​ಪಿ ನಿಗದಿಪಡಿಸಿದ ಬೆನ್ನಲ್ಲೇ ಕಾರ್ಖಾನೆಗಳು ಹೆಚ್ಚುವರಿಯಾಗಿ ನೀಡಬೇಕಾದ ದರದ ಒಪ್ಪಂದಕ್ಕೆ ಮಾಲೀಕರು ಸಮ್ಮತಿಸಿದ್ದಾರೆ. ರೈತರು ತಮ್ಮೊಳಗೆ ಆಂತರಿಕ ಚರ್ಚೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಲು ಎರಡು ದಿನಗಳ ಕಾಲಾವಕಾಶ ಕೇಳಿದ್ದಾರೆ” ಎಂದು ವಿವರಿಸಿದರು.

ರೈತರು-ಕಾರ್ಖಾನೆ ಎರಡೂ ಉಳಿಯಬೇಕು:

“ನಮಗೆ ರೈತರ ಬದುಕು ಮುಖ್ಯ, ಹಾಗೆಯೇ ಕಾರ್ಖಾನೆಗಳೂ ಉಳಿಯಬೇಕು. ಇಬ್ಬರೂ ಒಪ್ಪಂದದ ತೀರಾ ಹತ್ತಿರಕ್ಕೆ ಬಂದಿದ್ದು, ಹೋರಾಟ ಸುಖಾಂತ್ಯಗೊಂಡಿದೆ. ರೈತರಿಗೆ ಪ್ರೋತ್ಸಾಹ ನೀಡಲು ನಮ್ಮ ಸರ್ಕಾರ ಬದ್ಧವಾಗಿದ್ದು, ಅಗತ್ಯಬಿದ್ದರೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ನಾನೇ ನೇರವಾಗಿ ಸಿದ್ಧನಿದ್ದೇನೆ. ರೈತರಿಲ್ಲದೆ ಸರ್ಕಾರವಿಲ್ಲ, ಸರ್ಕಾರದ ಮಧ್ಯಸ್ಥಿಕೆ ಸದಾ ಅವರ ಬೆಂಬಲಕ್ಕೆ ಇರಲಿದೆ” ಎಂದು ಸಿಎಂ ಭರವಸೆ ನೀಡಿದರು.

ಈ ಮಹತ್ವದ ಸಭೆಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ, ಸಂತೋಷ್ ಲಾಡ್, ಶಾಸಕ ಎನ್.ಎಚ್. ಕೋನರೆಡ್ಡಿ, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್ ಹಾಗೂ ಪ್ರಮುಖ ಕಾರ್ಖಾನೆ ಮಾಲೀಕರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 


Share this with Friends

Related Post