Wed. Oct 28th, 2026

ವಿಎಒ ಪರೀಕ್ಷಾ ಅಕ್ರಮ ಶಂಕೆ: ತನಿಖೆ ನಡೆಸಿ ವರದಿ ನೀಡುವಂತೆ ಹಾವೇರಿ ಡಿಸಿಗೆ ಕೆಇಎ ಸೂಚನೆ

Share this with Friends

ಬೆಂಗಳೂರು: ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ ಪರೀಕ್ಷೆಯ ಫಲಿತಾಂಶದಲ್ಲಿ ಅಭ್ಯರ್ಥಿಯೊಬ್ಬರು ಅಸಹಜವಾಗಿ ಗರಿಷ್ಠ ಅಂಕಗಳನ್ನು ಪಡೆದಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ತನಿಖೆಗೆ ಆದೇಶಿಸಿದೆ. ಈ ಕುರಿತು ಸಮಗ್ರ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಹಾವೇರಿ ಜಿಲ್ಲಾಧಿಕಾರಿಗೆ ಕೆಇಎ ಪತ್ರ ಬರೆದಿದೆ.

ಕೆಎಸ್ಆರ್ ಪಿ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಗಳಿಸಿದ್ದ ಹಾವೇರಿ ಜಿಲ್ಲೆಯ ಅಭ್ಯರ್ಥಿ ಶಂಕರ ಬನ್ನೂರು ಎಂಬುವರು, ಅಕ್ಟೋಬರ್ 4 ರಂದು ಶಿಗ್ಗಾವಿ ಕೇಂದ್ರದಲ್ಲಿ ನಡೆದ ವಿಎಒ ಪರೀಕ್ಷೆಯಲ್ಲಿ ಬರೋಬ್ಬರಿ 151 ಅಂಕಗಳನ್ನು ಪಡೆದಿದ್ದಾರೆ. ಅಭ್ಯರ್ಥಿಯ ಸಾಧಾರಣ ಶೈಕ್ಷಣಿಕ ಹಿನ್ನೆಲೆಗೆ ಹೋಲಿಸಿದರೆ ಈ ಅಂಕಗಳು ಅತಿ ಹೆಚ್ಚಾಗಿದ್ದು, ಪರೀಕ್ಷೆಯಲ್ಲಿ ಭ್ರಷ್ಟಾಚಾರ ನಡೆದಿರಬಹುದು ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಗೆ ನಿರ್ಧರಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಸಿಸಿಟಿವಿ ತಪಾಸಣೆಗೆ ಆದೇಶ:

ಜಿಲ್ಲಾ ಪರೀಕ್ಷಾ ಮುಖ್ಯ ಅಧೀಕ್ಷಕರೂ ಆಗಿರುವ ಹಾವೇರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಪ್ರಾಧಿಕಾರ, ಪರೀಕ್ಷಾ ಕೇಂದ್ರದಲ್ಲಿ ನಡೆದಿರಬಹುದಾದ ಸಂಭಾವ್ಯ ಲೋಪಗಳ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಸೂಚಿಸಿದೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ದೂರು ದಾಖಲಿಸುವಂತೆ ನಿರ್ದೇಶನ ನೀಡಲಾಗಿದೆ. ಪ್ರಾಧಿಕಾರದ ಪ್ರಾಥಮಿಕ ಪರಿಶೀಲನೆಯಲ್ಲಿ ಮುಖ ಚಹರೆ ತಂತ್ರಜ್ಞಾನ (Face Recognition) ಮತ್ತು ಒಎಂಆರ್ (OMR) ಸ್ಕ್ಯಾನಿಂಗ್ ಪ್ರಕ್ರಿಯೆಗಳು ಸರಿಯಾಗಿಯೇ ಇರುವುದು ದೃಢಪಟ್ಟಿದೆ. ಆದಾಗ್ಯೂ, ಪರೀಕ್ಷಾ ಕೇಂದ್ರದ ಮಟ್ಟದಲ್ಲಿ ಏನಾದರೂ ಅಕ್ರಮ ನಡೆದಿದೆಯೇ ಎಂಬುದನ್ನು ಜಿಲ್ಲಾಧಿಕಾರಿಗಳ ವರದಿ ಬಹಿರಂಗಪಡಿಸಬೇಕಿದೆ.

ದಾಖಲೆಗಳಲ್ಲೂ ಗೊಂದಲ:

ಅಭ್ಯರ್ಥಿಯು 2013 ರಲ್ಲಿ ದ್ವಿತೀಯ ಪಿಯುಸಿ ಪಾಸಾಗಿರುವುದು ಪದವಿ ಪೂರ್ವ ಶಿಕ್ಷಣ ಇಲಾಖೆಯ ದತ್ತಾಂಶದೊಂದಿಗೆ ಹೊಂದಾಣಿಕೆಯಾಗಿದೆ. ಆದರೆ, ಕೆಎಸ್ಆರ್ ಪಿ ಪರೀಕ್ಷೆಯ ಅರ್ಜಿಯಲ್ಲಿ ಅಭ್ಯರ್ಥಿ ತಾನು 2026 ರಲ್ಲಿ ಪಿಯುಸಿ ಉತ್ತೀರ್ಣನಾಗಿದ್ದೇನೆ ಎಂದು ತಿದ್ದುಪಡಿ ಮಾಡಿಕೊಂಡಿರುವುದು ಪ್ರಾಧಿಕಾರದ ಸರ್ವರ್‌ನಲ್ಲಿ ಪತ್ತೆಯಾಗಿದೆ. ಕಷ್ಟಪಟ್ಟು ಓದುವ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ತಡೆಯಲು ಮತ್ತು ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಇಎ ಸ್ಪಷ್ಟಪಡಿಸಿದೆ.

 


Share this with Friends

Related Post