ಹೊಸದಿಲ್ಲಿ.ಮಾ.22: ಕೇಜ್ರಿವಾಲ್ ಅವರು ಈಗ, ಹಿಂದೆ ಮತ್ತು ಮುಂದೆಯೂ ದಿಲ್ಲಿ ಸಿಎಂ ಆಗಿ ಇರಲಿದ್ದಾರೆ. ಅಗತ್ಯಬಿದ್ದರೆ, ಕೇಜ್ರಿವಾಲ್ ಅವರು ಜೈಲಿನಿಂದಲೇ ಸರ್ಕಾರ ನಡೆಸುತ್ತಾರೆ ಎಂದು ಸಚಿವೆ ಆತಿಶಿ ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಆತಿಶಿ, “ಕೇಜ್ರಿವಾಲ್ ಅವರ ಬಂಧನವು ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತನ್ನ ಹಾದಿ ಸುಗಮಗೊಳಿಸಲು ನಡೆಸಿರುವ ರಾಜಕೀಯ ಸಂಚು” ಎಂದು ಆರೋಪಿಸಿದರು.
“ಅಗತ್ಯಬಿದ್ದರೆ, ಕೇಜ್ರಿವಾಲ್ ಅವರು ಜೈಲಿನಿಂದಲೇ ಸರ್ಕಾರ ನಡೆಸುತ್ತಾರೆ ಎಂದು ನಾವು ಬಹಳ ಹಿಂದೆಯೇ ಹೇಳಿದ್ದೆವು. ಅವರು ಹಾಗೆಯೇ ಸರ್ಕಾರ ನಡೆಸಬಹುದಾಗಿದೆ. ಅವರು ಹಾಗೆ ಮಾಡುವುದನ್ನು ಯಾವ ನಿಯಮವೂ ಅವರನ್ನು ತಡೆಯಲಾರದು. ಅವರು ಅಪರಾಧಿ ಎಂದು ಸಾಬೀತಾಗಿಲ್ಲ. ಹೀಗಾಗಿ ಅವರು ದಿಲ್ಲಿ ಸಿಎಂ ಆಗಿ ಉಳಿಯುತ್ತಾರೆ” ಎಂದು ತಿಳಿಸಿದರು.
ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಆತಿಶಿ, “ಕೇಜ್ರಿವಾಲ್ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರೊಂದು ಸಿದ್ಧಾಂತ ಎಂದು ಪ್ರಧಾನಿಗೆ ಹೇಳಲು ನಾನು ಬಯಸುತ್ತೇನೆ. ಅವರು ಕೇಜ್ರಿವಾಲ್ ಬಗ್ಗೆ ಹೆದರಿದ್ದಾರೆ. ಹಾಗೆಯೇ ಕೇಜ್ರಿವಾಲ್ ಈಗ, ಹಿಂದೆ ಮತ್ತು ಮುಂದೆಯೂ ದಿಲ್ಲಿ ಸಿಎಂ ಆಗಿ ಇರುತ್ತಾರೆ. ಅದರಲ್ಲಿ ಯಾವ ಪ್ರಶ್ನೆಯೂ ಇಲ್ಲ” ಎಂದು ಆಕ್ರೋಶದಿಂದ ಹೇಳಿದರು.
ಕೇಜ್ರಿವಾಲ್ ಬಂಧನ ವಿರೋಧಿ ಆಮ್ ಆದ್ಮಿ ಪಕ್ಷವು ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿದೆ. ಪಕ್ಷದ ಪ್ರಮುಖ ನಾಯಕರಾದ ಪಂಜಾಬ್ ಸಚಿವ ಹರ್ಜೋತ್ ಸಿಂಗ್, ದಿಲ್ಲಿ ಸಚಿವರಾದ ಆತಿಶಿ ಹಾಗೂ ಇಮ್ರಾನ್ ಹುಸೇನ್ ಅವರನ್ನು ಬಂಧಿಸಲಾಗಿದೆ. ಕೇಜ್ರಿವಾಲ್ ಅವರ ಕುಟುಂಬವನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.