ಶಿವಮೊಗ್ಗ: ಜಿಲ್ಲೆಯ ಪುಟಾಣಿ ಸಾಧಕಿಯೊಬ್ಬಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೈಲಿಗಲ್ಲು ಸ್ಥಾಪಿಸಿ ಶಿವಮೊಗ್ಗದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿದ್ದಾಳೆ. ಕೇವಲ 5 ವರ್ಷ 7 ತಿಂಗಳ ವಯಸ್ಸಿನಲ್ಲೇ ವಿಶ್ವದ 200 ದೇಶಗಳ ಧ್ವಜಗಳನ್ನು ಕಣ್ಣು ಮಿಟುಕಿಸುವುದರೊಳಗೆ ಗುರುತಿಸಿ ಹೆಸರು ಹೇಳುವ ಮೂಲಕ ಬಿ. ಕೆ. ಶ್ರೀನಿಕಾ ‘ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ಗೆ (International Book of Records) ಲಗ್ಗೆ ಇಟ್ಟಿದ್ದಾಳೆ.
ಇಲ್ಲಿನ ಓ.ಟಿ. ರಸ್ತೆಯ ನಿವಾಸಿಗಳಾದ ಭಾಸ್ಕರ್ ಕೆ. ಮತ್ತು ಗಾಯತ್ರಿ ದಂಪತಿಯ ಸುಪುತ್ರಿಯಾದ ಶ್ರೀನಿಕಾ, ಶಿವಮೊಗ್ಗದ ಪ್ರಜ್ಞಾ ಎಜುಕೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ‘ಪೇಸ್ ಇಂಟರ್‌ನ್ಯಾಷನಲ್ ಶಾಲೆ’ಯ (PACE International School) ವಿದ್ಯಾರ್ಥಿನಿ. ಕೇವಲ 5 ವರ್ಷ, 7 ತಿಂಗಳು, 2 ದಿನಗಳ ಪ್ರಾಯದಲ್ಲೇ ಜಗತ್ತಿನ ನಕಾಶೆ ಹಾಗೂ ಧ್ವಜಗಳ ಜ್ಞಾನ ಸಂಪಾದಿಸಿರುವ ಈಕೆಯ ಅಪ್ರತಿಮ ನೆನಪಿನ ಶಕ್ತಿ ಮತ್ತು ಏಕಾಗ್ರತೆಗೆ ಅಂತರರಾಷ್ಟ್ರೀಯ ಸಂಸ್ಥೆ ಅಧಿಕೃತ ಮುದ್ರೆ ಒತ್ತಿದೆ.
ಬಾಲ್ಯದಲ್ಲೇ ಜಾಗತಿಕ ಸಂಸ್ಕೃತಿ, ವಿವಿಧ ದೇಶಗಳ ಧ್ವಜಗಳ ಬಗ್ಗೆ ಅಪಾರ ಕುತೂಹಲ ಹೊಂದಿದ್ದ ಶ್ರೀನಿಕಾ, ಚಾರ್ಟ್‌ನಲ್ಲಿದ್ದ 200 ದೇಶಗಳ ಧ್ವಜಗಳನ್ನು ನಿರರ್ಗಳವಾಗಿ ಗುರುತಿಸಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ಮೈಲಿಗಲ್ಲು ತಲುಪಿದ ಜಗತ್ತಿನ ಅಪರೂಪದ ಸಾಧಕಿಯಾಗಿ ಹೊರಹೊಮ್ಮಿದ್ದಾಳೆ.
ಪುಟಾಣಿಯ ಈ ಅಪ್ರತಿಮ ಜ್ಞಾನ ಭಂಡಾರಕ್ಕೆ ಪ್ರಜ್ಞಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಟ್ರಸ್ಟ್ ಖಜಾಂಚಿ ಕೆ.ಇ. ಕಾಂತೇಶ್, ಕಾರ್ಯದರ್ಶಿ ಬಿ.ಎನ್. ವಿಶ್ವನಾಥಯ್ಯ, ಉಪಾಧ್ಯಕ್ಷ ಆನಂದ್, ಶಾಲೆಯ ಪ್ರಾಂಶುಪಾಲ ಪವನ್ ಕುಮಾರ್ ಹಾಗೂ ಕೋ-ಆರ್ಡಿನೇಟರ್ ಶುಭ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಬಾಲ್ಯದಲ್ಲೇ ಜಾಗತಿಕ ದೃಷ್ಟಿಕೋನ ಬೆಳೆಸಿಕೊಂಡಿರುವ ಶ್ರೀನಿಕಾ ಮುಂದಿನ ದಿನಗಳಲ್ಲಿ ದೇಶದ ಹೆಮ್ಮೆಯ ಪ್ರಜೆಯಾಗಲಿ ಎಂದು ಹಾರೈಸಿದ್ದಾರೆ. ಮಗಳ ಜಾಗತಿಕ ಮಟ್ಟದ ಸಾಧನೆಗೆ ಹೆತ್ತವರೂ ಕೂಡ ಭಾವುಕರಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

