Sat. Oct 31st, 2026

ದೀಪಾವಳಿ ಹಬ್ಬ: ಪ್ರಯಾಣಿಕರ ಅನುಕೂಲಕ್ಕಾಗಿ KSRTC ಯಿಂದ 2,600 ಹೆಚ್ಚುವರಿ ಬಸ್‌ಗಳ ವಿಶೇಷ ವ್ಯವಸ್ಥೆ

Share this with Friends

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರ ಸುಗಮ ಪ್ರಯಾಣಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಒಟ್ಟು 2,600 ಹೆಚ್ಚುವರಿ ವಿಶೇಷ ಬಸ್‌ಗಳ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ.

ದಿನಾಂಕ 08.11.2026ರ ಭಾನುವಾರ ನರಕ ಚತುರ್ದಶಿ ಮತ್ತು 10.11.2026ರ ಮಂಗಳವಾರ ಬಲಿಪಾಡ್ಯಮಿ ಹಬ್ಬ ಇರುವುದರಿಂದ, ವಾರಾಂತ್ಯದ ದಿನಗಳನ್ನೂ ಒಳಗೊಂಡು ದಿನಾಂಕ 06.11.2026 ರಿಂದ 08.11.2026 ರವರೆಗೆ ಬೆಂಗಳೂರಿನಿಂದ ರಾಜ್ಯದ ಹಾಗೂ ಹೊರರಾಜ್ಯದ ವಿವಿಧ ಸ್ಥಳಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ನಂತರ ವಿವಿಧ ಊರುಗಳಿಂದ ಬೆಂಗಳೂರಿಗೆ ಮರಳುವ ಪ್ರಯಾಣಿಕರಿಗಾಗಿ ದಿನಾಂಕ 10.11.2026 ಮತ್ತು 11.11.2026 ರಂದು ವಿಶೇಷ ಬಸ್‌ಗಳು ಸಂಚರಿಸಲಿವೆ.

ಪ್ರಮುಖ ನಿಲ್ದಾಣಗಳು ಮತ್ತು ಸಂಚಾರ ಮಾರ್ಗಗಳು:

ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್): ಇಲ್ಲಿಂದ ಉಡುಪಿ, ಕುಂದಾಪುರ, ಪುತ್ತೂರು, ಮಂಗಳೂರು, ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ದಾವಣಗೆರೆ, ಗೋಕರ್ಣ, ಹಾಸನ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಸಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಹಾಗೂ ಹೊರರಾಜ್ಯದ ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಬಸ್‌ಗಳು ಹೊರಡಲಿವೆ.

ಮೈಸೂರು ರಸ್ತೆ ಬಸ್ ನಿಲ್ದಾಣ: ಇಲ್ಲಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆಗೆ ಬಸ್‌ಗಳು ಸಂಚರಿಸಲಿವೆ.

ಶಾಂತಿನಗರ ಬಿಎಂಟಿಸಿ ನಿಲ್ದಾಣ: ತಮಿಳುನಾಡು ಮತ್ತು ಕೇರಳ ರಾಜ್ಯಗಳ ಪ್ರಮುಖ ನಗರಗಳಾದ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕೋಯಿಕ್ಕೋಡ್ ಮುಂತಾದ ಸ್ಥಳಗಳಿಗೆ ಹೋಗುವ ಬಸ್‌ಗಳು ಇಲ್ಲಿಂದ ಹೊರಡಲಿವೆ.

ಮುಂಗಡ ಕಾಯ್ದಿರಿಸುವಿಕೆಗೆ ರಿಯಾಯಿತಿ ಹಾಗೂ ಸೌಲಭ್ಯಗಳು:

ಗುಂಪು ರಿಯಾಯಿತಿ: ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇಕಡಾ 5 ರಷ್ಟು ರಿಯಾಯಿತಿ ಸಿಗಲಿದೆ.

ಪ್ರಯಾಣದ ರಿಯಾಯಿತಿ: ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದಾಗ, ಬರುವ ಪ್ರಯಾಣದ ದರದಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಆನ್‌ಲೈನ್ ಬುಕಿಂಗ್: ಸಾರ್ವಜನಿಕರು ನಿಗಮದ ಅಧಿಕೃತ ವೆಬ್‌ಸೈಟ್ www.ksrtc.karnataka.gov.in ಮುಖಾಂತರ ಸುಲಭವಾಗಿ ಇ-ಟಿಕೆಟ್ ಬುಕ್ ಮಾಡಬಹುದು.

ಕೌಂಟರ್ ಸೌಲಭ್ಯ: ಕರ್ನಾಟಕ ಮತ್ತು ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿಯ ಪ್ರಮುಖ ನಗರಗಳಲ್ಲಿರುವ ಕೌಂಟರ್‌ಗಳ ಮೂಲಕವೂ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.

ಹೆಚ್ಚುವರಿ ಸಾರಿಗೆಗಳ ಹೊರಡುವ ಸ್ಥಳ, ಸಮಯ ಮತ್ತು ವಾಹನ ಹೊರಡುವ ನಿಖರವಾದ ಪಿಕ್-ಅಪ್ ಪಾಯಿಂಟ್ ವಿವರಗಳನ್ನು ಮುಂಗಡ ಟಿಕೆಟ್‌ಗಳ ಮೇಲೆ ನಮೂದಿಸಲಾಗಿದ್ದು, ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಇವುಗಳನ್ನು ಗಮನಿಸಲು ಕೋರಲಾಗಿದೆ. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಎಲ್ಲಾ ತಾಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ವಿಶೇಷ ಬಸ್‌ಗಳ ಕಾರ್ಯಾಚರಣೆ ನಡೆಸಲಾಗುವುದು ಎಂದು ನಿಗಮ ತಿಳಿಸಿದೆ

 


Share this with Friends

Related Post