Sun. Nov 1st, 2026

‘ಹಾಸನ್‌’ ಇನ್ಮುಂದೆ ಅಧಿಕೃತವಾಗಿ ‘ಹಾಸನ’: ಕೇಂದ್ರದ ಒಪ್ಪಿಗೆ ಪಡೆಯಲು ಮುಂದಾದ ರಾಜ್ಯ ಸರ್ಕಾರ 

Share this with Friends

ಬೆಂಗಳೂರು: “ಇಂಗ್ಲಿಷ್ ಶೈಲಿಯ ‘ಹಾಸನ್’ (Hassan) ಹೆಸರನ್ನು ಕೈಬಿಟ್ಟು, ಅಧಿಕೃತವಾಗಿ ‘ಹಾಸನ’ ಎಂದು ಮರುನಾಮಕರಣ ಮಾಡಲು ಸರ್ಕಾರ ಗಂಭೀರ ಕ್ರಮ ಕೈಗೊಂಡಿದೆ” ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಪ್ರಕಟಿಸಿದ್ದಾರೆ.

ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವದ ಅದ್ಧೂರಿ 3 ಸಾವಿರ ಅಡಿ ಉದ್ದದ ಕನ್ನಡ ಧ್ವಜದ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಜಿಲ್ಲೆಯ ಹೆಸರನ್ನು ಬದಲಾಯಿಸುವ ಕುರಿತು ಈಗಾಗಲೇ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಅನುಮೋದನೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಯ್ಸಳರ ಲಾಂಛನ ಹಾಗೂ ಚತುರ್ಮುಖ ಅಭಿವೃದ್ಧಿ

ಹಾಸನ ನಗರದ ಪ್ರಮುಖ ಕೇಂದ್ರವಾದ ಎನ್.ಆರ್. ವೃತ್ತದಲ್ಲಿ (N.R. Circle) ಜಿಲ್ಲೆಯ ಐತಿಹಾಸಿಕ ಹಿನ್ನೆಲೆಯನ್ನು ಬಿಂಬಿಸುವ ಭವ್ಯ ‘ಹೊಯ್ಸಳರ ಲಾಂಛನ’ವನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು. ಇದರೊಂದಿಗೆ ಜಿಲ್ಲೆಯ ಬಹುಕಾಲದ ಬೇಡಿಕೆಗಳಾದ ವಿಮಾನ ನಿಲ್ದಾಣ, ಐಐಟಿ (IIT) ಪ್ರತಿಷ್ಠಿತ ಶಿಕ್ಷಣ ಸಂಸ್ಥೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ ಸಾರ್ವಜನಿಕ ಲೋಕಾರ್ಪಣೆಗೆ ತರಲಾಗುವುದು ಎಂದರು.

ವಿಮಾನ ನಿಲ್ದಾಣ ಕಾಮಗಾರಿಗೆ ವೇಗ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಾಸನ ವಿಮಾನ ನಿಲ್ದಾಣ ಯೋಜನೆಯ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ. ಈ ಯೋಜನೆಗೆ ಅಗತ್ಯವಿರುವ ಹೆಚ್ಚುವರಿ ಧನಸಹಾಯವನ್ನು ಒದಗಿಸಲಾಗುತ್ತಿದ್ದು, ಪ್ರಸ್ತುತ ಸರ್ಕಾರದ ಅವಧಿ ಮುಗಿಯುವ ಮುನ್ನವೇ ವಿಮಾನ ನಿಲ್ದಾಣವನ್ನು ಉದ್ಘಾಟಿಸುವ ಸ್ಪಷ್ಟ ಗುರಿ ಹೊಂದಲಾಗಿದೆ. ಇದಲ್ಲದೆ, ನೂತನ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡಗಳು ಈಗಾಗಲೇ ಉದ್ಘಾಟನಾ ಹಂತಕ್ಕೆ ತಲುಪಿದ್ದು, ಐಐಟಿ ತರಲು ನಿರಂತರ ಪ್ರಯತ್ನಗಳು ಸಾಗಿವೆ ಎಂದು ವಿವರಿಸಿದರು.

ಅದ್ದೂರಿ ಹಾಸನಾಂಬ ಉತ್ಸವ

ಪ್ರಸಕ್ತ ವರ್ಷದ ಹಾಸನಾಂಬ ದರ್ಶನೋತ್ಸವವು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ದೇಶದ ಮೂಲೆ ಮೂಲೆಗಳಿಂದ ಆಗಮಿಸುತ್ತಿರುವ ಲಕ್ಷಾಂತರ ಭಕ್ತಾದಿಗಳಿಗೆ ಸುಲಭ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಉತ್ಸವದ ಅಂಗವಾಗಿ ಆಯೋಜಿಸಿರುವ ಆಹಾರ ಮೇಳ, ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಜಾನಪದ ಕಾರ್ಯಕ್ರಮಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಕರ್ನಾಟಕದ ಅಸ್ಮಿತೆಯಾದ ಕನ್ನಡ ಬಾವುಟಕ್ಕೆ ಪ್ರತ್ಯೇಕ ಮಾನ್ಯತೆ ನೀಡುವ ಪ್ರಸ್ತಾವನೆಗೂ ಕೇಂದ್ರದಿಂದ ಶೀಘ್ರ ಅಸ್ತು ಸಿಗಲಿದೆ ಎಂದರು.

 

 


Share this with Friends

Related Post