Wed. Nov 4th, 2026

ಬೃಹತ್ ಇವಿ ಟ್ಯಾಕ್ಸಿ ಕಂಪನಿಗಳ ಅಬ್ಬರ: ಸ್ಥಳೀಯ ಸಣ್ಣ ಉದ್ಯಮಿಗಳ ಭವಿಷ್ಯಕ್ಕೆ ಆತಂಕ

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯ ಸಾರಿಗೆ ಮಾರುಕಟ್ಟೆಗೆ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಬಂಡವಾಳದ ವಿದ್ಯುತ್ ಚಾಲಿತ (EV) ಟ್ಯಾಕ್ಸಿ ಸಂಸ್ಥೆಗಳು ಲಗ್ಗೆ ಇಡುತ್ತಿರುವುದು ಸ್ಥಳೀಯ ಸಣ್ಣ ಉದ್ಯಮಿಗಳು ಹಾಗೂ ಟ್ಯಾಕ್ಸಿ ಮಾಲೀಕರಲ್ಲಿ ತೀವ್ರ ಆತಂಕ ಮೂಡಿಸಿದೆ. ವಿಯೆಟ್ನಾಂ ಮೂಲದ ‘ವಿನ್‌ಫಾಸ್ಟ್’ ಕಂಪನಿಯ ಇವಿ ವಾಹನಗಳನ್ನು ಬಳಸುವ ‘ಗ್ರೀನ್ ಎಸ್‌ಎಂ’ನಂತಹ ದೈತ್ಯ ಸಂಸ್ಥೆಗಳು ಬೆಂಗಳೂರಿನಲ್ಲಿ ವ್ಯಾಪಕವಾಗಿ ಸೇವೆ ಆರಂಭಿಸಿದರೆ, ಸ್ವಯಂ ಉದ್ಯೋಗ ನಂಬಿರುವ ಸಾವಿರಾರು ಸ್ಥಳೀಯ ಚಾಲಕರು ಬೀದಿಗೆ ಬೀಳುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ (ರಿ.) ಕಳವಳ ವ್ಯಕ್ತಪಡಿಸಿದೆ.

ಈ ಕುರಿತು ಸರ್ಕಾರದ ಗಮನ ಸೆಳೆದಿರುವ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಅವರು, “ಸಾಲ ಮಾಡಿ ವಾಹನ ಖರೀದಿಸಿ, ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿ ಸ್ವಾಭಿಮಾನದಿಂದ ಬದುಕುತ್ತಿರುವ ಸ್ಥಳೀಯ ಮಾಲೀಕರು ಈಗಾಗಲೇ ಮಾರುಕಟ್ಟೆಯಲ್ಲಿರುವ ದೈತ್ಯ ಅಗ್ರಿಗೇಟರ್‌ಗಳ ನಡುವೆ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಬೃಹತ್ ವಾಹನ ಪಡೆಯೊಂದಿಗೆ ಹೊಸ ವಿದೇಶಿ ಕಂಪನಿಗಳು ಮಾರುಕಟ್ಟೆಗೆ ಇಳಿದರೆ ಸಣ್ಣ ಆಪರೇಟರ್‌ಗಳು ಬದುಕು ನಡೆಸುವುದು ಹೇಗೆ?” ಎಂದು ಪ್ರಶ್ನಿಸಿದ್ದಾರೆ.

ಸ್ಥಳೀಯರ ಉದ್ಯೋಗಕ್ಕೆ ಕುತ್ತು:

ವಾಹನ ತಯಾರಿಕಾ ಸಂಸ್ಥೆಗಳು ಅಥವಾ ತಂತ್ರಜ್ಞಾನ ಒದಗಿಸುವ ಕಂಪನಿಗಳೇ ನೇರವಾಗಿ ಸ್ವಂತ ವಾಹನ ಪಡೆಯೊಂದಿಗೆ ಟ್ಯಾಕ್ಸಿ ಉದ್ಯಮಕ್ಕೆ ಇಳಿದಾಗ, ಒಂದೆರಡು ಕಾರುಗಳನ್ನು ನಂಬಿಕೊಂಡಿರುವ ಸಣ್ಣ ಮಾಲೀಕರು ಅವರೊಂದಿಗೆ ಪೈಪೋಟಿ ನಡೆಸುವುದು ಅಸಾಧ್ಯವಾಗುತ್ತದೆ. ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಸಿಗುವ ಹಣಕಾಸು ನೆರವು, ರಿಯಾಯಿತಿಗಳು ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳು ಸಾಮಾನ್ಯ ಟ್ಯಾಕ್ಸಿ ಚಾಲಕರಿಗೆ ಲಭ್ಯವಾಗುತ್ತಿಲ್ಲ. ಹೀಗಾಗಿ ಇವಿ ತಂತ್ರಜ್ಞಾನದ ಬೆಳವಣಿಗೆಯು ಸ್ಥಳೀಯರ ಉದ್ಯೋಗವನ್ನು ಕಸಿದುಕೊಳ್ಳುವ ಬದಲಿಗೆ ಅವರಿಗೆ ಪೂರಕವಾಗಿರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಇತರ ರಾಜ್ಯಗಳ ಮಾದರಿ ಅಧ್ಯಯನಕ್ಕೆ ಆಗ್ರಹ:

ಗೋವಾ, ಕೇರಳ, ಶ್ರೀನಗರ ಹಾಗೂ ಲೇ–ಲಡಾಖ್‌ನಂತಹ ಪ್ರವಾಸಿ ತಾಣಗಳಲ್ಲಿ ಸ್ಥಳೀಯ ಸಾರಿಗೆ ಉದ್ಯಮಿಗಳ ಜೀವನೋಪಾಯ ಮತ್ತು ಹಿತರಕ್ಷಣೆ ಕಾಯಲು ವಿಶೇಷ ನಿಯಮಾವಳಿ ಹಾಗೂ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿದೆ. ಅದೇ ಮಾದರಿಯನ್ನು ಕರ್ನಾಟಕ ಸರ್ಕಾರವೂ ಅಧ್ಯಯನ ಮಾಡಬೇಕು. ನಮ್ಮ ಮಣ್ಣಿನ ಸಣ್ಣ ಉದ್ಯಮಿಗಳ ಹೂಡಿಕೆ, ಸಾಲದ ಹೊರೆ ಮತ್ತು ನಿರ್ವಹಣಾ ವೆಚ್ಚಗಳನ್ನು ಪರಿಗಣಿಸಿ, ಅವರಿಗೆ ಮಾರುಕಟ್ಟೆಯಲ್ಲಿ ನ್ಯಾಯಸಮ್ಮತ ವ್ಯಾಪಾರ ಅವಕಾಶ ಸಿಗುವಂತೆ ಸರ್ಕಾರ ತಕ್ಷಣವೇ ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ರೂಪಿಸಬೇಕು ಎಂದು ಹೊಳ್ಳ ಒತ್ತಾಯಿಸಿದ್ದಾರೆ.

 

 


Share this with Friends

Related Post