Wed. Nov 4th, 2026

ಮೋಹನದಾಸ್ ಪೈ ‘ಶಕುನಿ’ ಕೆಲಸ ಮಾಡುತ್ತಿದ್ದಾರೆ, ನನ್ನ ಹೇಳಿಕೆಗೆ ಬದ್ಧ: ಕರವೇ ಅಧ್ಯಕ್ಷ ನಾರಾಯಣಗೌಡ 

Share this with Friends

ಬೆಂಗಳೂರು: “ಕನ್ನಡಿಗರ ಹಿತಾಸಕ್ತಿಯ ವಿಷಯದಲ್ಲಿ ಉದ್ಯಮಿ ಮೋಹನದಾಸ್ ಪೈ ಅವರು ಮಾಡುತ್ತಿರುವುದು ಶಕುನಿ ಕೆಲಸಗಳನ್ನೇ. ಈ ಕುರಿತು ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ತಾವು ಪೈ ವಿರುದ್ಧ ಬಳಸಿದ್ದ ‘ಶಕುನಿ’ ಪದದ ಕುರಿತು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ಒಟ್ಟಾರೆ ಉದ್ಯಮ ವಲಯದ ಮೇಲೆ ತಮಗೆ ಯಾವುದೇ ದ್ವೇಷ ಅಥವಾ ಪೂರ್ವಾಗ್ರಹ ಇಲ್ಲ ಎಂದಿರುವ ಅವರು, ಕನ್ನಡಿಗರ ಆಶೋತ್ತರಗಳ ವಿರುದ್ಧ ಸದಾ ಕಾರ್ಯನಿರ್ವಹಿಸುವ ಬೆರಳೆಣಿಕೆಯ ಉದ್ಯಮಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರ ಉದ್ಯೋಗ ಮತ್ತು ಭಾಷಾ ನೀತಿಗೆ ಅಡ್ಡಿ:

ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದ್ವಿಭಾಷಾ ನೀತಿಯನ್ನು ಜಾರಿಗೆ ತರಲು ಮುಂದಾದಾಗ ಮೋಹನದಾಸ್ ಪೈ ಅವರು ಪಠ್ಯಕ್ರಮದಲ್ಲಿ ಹಿಂದಿ ಇರಲೇಬೇಕು ಎಂದು ವಾದಿಸಿ ಅದಕ್ಕೆ ತಡೆಯೊಡ್ಡಿದ್ದರು. ಅಲ್ಲದೆ, ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಕಾಯ್ದೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದಾಗಲೂ, ಮೋಹನದಾಸ್ ಪೈ ಮತ್ತು ಕಿರಣ್ ಮಜುಂದಾರ್ ಶಾ ಅವರನ್ನೊಳಗೊಂಡ ‘ಬ್ಲಾಕ್‌ಮೇಲ್ ಗ್ಯಾಂಗ್’ ಸರ್ಕಾರಕ್ಕೆ ಅಡ್ಡಿಪಡಿಸಿತ್ತು ಎಂದು ನಾರಾಯಣಗೌಡರು ನೇರ ಆರೋಪ ಮಾಡಿದ್ದಾರೆ. “ರಾಜ್ಯವನ್ನು ಜನಪ್ರತಿನಿಧಿಗಳು ನಡೆಸುತ್ತಿದ್ದಾರೋ ಅಥವಾ ಸ್ವಯಂ ಘೋಷಿತ ಉದ್ಯಮ ನಾಯಕರೆಂಬ ಕಿಡಿಗೇಡಿಗಳು ನಡೆಸುತ್ತಿದ್ದಾರೋ ಎಂಬ ಅನುಮಾನ ಮೂಡಿದೆ” ಎಂದು ಅವರು ಕಿಡಿಕಾರಿದ್ದಾರೆ.

ಐಟಿ ಸಂಸ್ಥೆಗಳ ಅಭಿಯಾನಕ್ಕೆ ಉತ್ತಮ ಬೆಂಬಲ:

ಖಾಸಗಿ ಐಟಿ ಸಂಸ್ಥೆಗಳಿಗೆ ಕರವೇ ವತಿಯಿಂದ ಪತ್ರ ಬರೆಯುವ ಅಭಿಯಾನ ಆರಂಭಿಸುತ್ತಿದ್ದಂತೆ ಮೋಹನದಾಸ್ ಪೈ ಅವರು ಆತಂಕಗೊಂಡು ‘ಸ್ವಯಂಘೋಷಿತ ಕಾವಲುಪಡೆ’ ಎಂದು ಟೀಕಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಐಟಿ ವಲಯದಿಂದ ಈ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿದ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿದ್ದು, ಹಲವು ಉದ್ಯಮಿಗಳು ಇದನ್ನು ಬೆಂಬಲಿಸಿದ್ದಾರೆ. ಈ ಯಶಸ್ಸನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಾರಿದ್ದಾರೆ.

ಗೋವಾ ಪ್ರೇಮ ಕರ್ನಾಟಕದ ಮೇಲೇಕಿಲ್ಲ?:

ಮೋಹನದಾಸ್ ಪೈ ಅವರು ಹಿಂದೆ ಗೋವಾ ಮತ್ತು ಕೊಂಕಣಿಗರ ಹಿತರಕ್ಷಣೆ ಹಾಗೂ ಪ್ರಾದೇಶಿಕ ಹೆಮ್ಮೆಯ ಪರವಾಗಿ ಮಾಡಿದ್ದ ಟ್ವೀಟ್ ಅನ್ನು ಉಲ್ಲೇಖಿಸಿದ ನಾರಾಯಣಗೌಡರು, “ಅವರಿಗೆ ತಮ್ಮ ತವರು ರಾಜ್ಯ ಗೋವಾದ ಮೇಲಿರುವ ಅಪಾರ ಪ್ರೇಮ ಮತ್ತು ಕಾಳಜಿಯನ್ನು ನಾನು ತಪ್ಪೆನ್ನುವುದಿಲ್ಲ. ಆದರೆ, ಎಲ್ಲವನ್ನೂ ಕೊಟ್ಟ ಕರ್ನಾಟಕದ ಜನರ ವಿಷಯ ಬಂದಾಗ ಅವರು ಯಾಕೆ ವಿಷ ಕಾರುತ್ತಾರೆ?” ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲೇ ಇದ್ದುಕೊಂಡು, ಇಲ್ಲಿನ ಸರ್ಕಾರಗಳನ್ನು ಬ್ಲಾಕ್‌ಮೇಲ್ ಮಾಡುತ್ತಾ ನಾಡಿನ ಹಿತಾಸಕ್ತಿಗೆ ಅಡ್ಡಗಾಲು ಹಾಕುವವರನ್ನು ಶಕುನಿ ಎನ್ನದೆ ಬೇರೇನೆನ್ನಬೇಕು ಎಂದು ಪ್ರಶ್ನಿಸಿದ ಅವರು, ಇನ್ನಾದರೂ ಪೈ ಅವರು ಕನ್ನಡಿಗರ ನೆಲೆಯಲ್ಲಿ ನಿಂತು ಚಿಂತಿಸಲಿ, ತಾಯಿ ರಾಜರಾಜೇಶ್ವರಿಯು ಅವರಿಗೆ ಒಳ್ಳೆಯ ಬುದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

 


Share this with Friends

Related Post