Wed. Nov 4th, 2026

2027ರ ವೇಳೆಗೆ ಎಲ್ಲಾ ಸರ್ಕಾರಿ ಶಾಲೆಗಳು ದ್ವಿಭಾಷಾ ಮಾಧ್ಯಮಕ್ಕೆ: ಸಚಿವ ಮಧು ಬಂಗಾರಪ್ಪ ಕರೆ

Share this with Friends

ಬೆಂಗಳೂರು: ರಾಜ್ಯದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರ ಮಹತ್ತರ ಹೆಜ್ಜೆ ಇಟ್ಟಿದೆ. ಬರುವ 2027ರ ಒಳಗೆ ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯನ್ನೂ ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ಮಾಧ್ಯಮದ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ.

ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (CSR) ಪ್ರತಿನಿಧಿಗಳ ಉನ್ನತ ಮಟ್ಟದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರದೊಂದಿಗೆ ಖಾಸಗಿ ಸಂಸ್ಥೆಗಳು ಮತ್ತು ಕಾರ್ಪೊರೇಟ್ ವಲಯವೂ ಕೈಜೋಡಿಸುವುದು ಅಗತ್ಯ ಎಂದರು.

ದ್ವಿಭಾಷಾ ಮಾಧ್ಯಮದ ಮೂಲಕ ಜಾಗತಿಕ ಸ್ಪರ್ಧೆ

ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಸಂಸ್ಥೆಗಳ ಮೂಲಕ ಒಟ್ಟು 1.12ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದನ್ನು ತಪ್ಪಿಸಲು ಮತ್ತು ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಈ ದ್ವಿಭಾಷಾ ಮಾಧ್ಯಮದ ಕ್ರಮ ಅನಿವಾರ್ಯವಾಗಿದೆ ಎಂದು ಸಚಿವರು ಪ್ರತಿಪಾದಿಸಿದರು. ಇದರ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯಲ್ಲೂ ಪ್ರಮುಖ ವಿಷಯಗಳನ್ನು ಕಲಿಯುವ ಅವಕಾಶ ಸಿಗಲಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಭಾಷೆಯ ಕಾರಣದಿಂದಾಗಿ ಜಾಗತಿಕ ಸ್ಪರ್ಧೆಯಲ್ಲಿ ಹಿಂದುಳಿಯಬಾರದು ಎಂಬುದು ಇದರ ಪ್ರಮುಖ ಆಶಯವಾಗಿದೆ.

ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ಅಭಿವೃದ್ಧಿಗೆ ಆದ್ಯತೆ

ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಕೆಪಿಎಸ್ ಶಾಲೆಗಳ ಪರಿಕಲ್ಪನೆಗೆ ವೇಗ ನೀಡಲಾಗುತ್ತಿದೆ. ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ 12ನೇ ತರಗತಿಯವರೆಗೆ ಒಂದೇ ಸೂರಿನಡಿ ಉಚಿತ ಶಿಕ್ಷಣ, ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ, ಆಧುನಿಕ ಸ್ಮಾರ್ಟ್ ತರಗತಿಗಳು ಹಾಗೂ ಉಚಿತ ಶಾಲಾ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ.

18 ಸಾವಿರ ಶಿಕ್ಷಕರ ಬೃಹತ್ ನೇಮಕಾತಿ

ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು नीಗಿಸಲು ಮುಂದಿನ ಶೈಕ್ಷಣಿಕ ವರ್ಷದೊಳಗೆ 18,000 ಖಾಯಂ ಶಿಕ್ಷಕರ ನೇಮಕಾತಿಗೆ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಪ್ರಸ್ತುತ ಕಲಿಕೆಗೆ ತೊಂದರೆಯಾಗದಂತೆ 43,553 ಅತಿಥಿ ಶಿಕ್ಷಕರನ್ನು ಈಗಾಗಲೇ ನಿಯೋಜಿಸಲಾಗಿದೆ.

ಐತಿಹಾಸಿಕ ಶೈಕ್ಷಣಿಕ ಸುಧಾರಣೆಗಳು ಮತ್ತು ಸಾರ್ವಕಾಲಿಕ ದಾಖಲೆ:

ಪರೀಕ್ಷಾ ಪದ್ಧತಿ ಸುಧಾರಣೆ: ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ನಿವಾರಿಸಲು ಜಾರಿಗೆ ತಂದಿದ್ದ 3 ಪರೀಕ್ಷೆಗಳ ವ್ಯವಸ್ಥೆಯನ್ನು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 2026-27ನೇ ಸಾಲಿನಿಂದ ಎರಡು ಪರೀಕ್ಷೆಗಳಿಗೆ ಸೀಮಿತಗೊಳಿಸಲಾಗಿದೆ. ಇದರ ಫಲವಾಗಿ ಎಸ್‌ಎಸ್‌ಎಲ್‌ಸಿ (ಶೇ. 98.08) ಮತ್ತು ಪಿಯುಸಿಯಲ್ಲಿ (ಶೇ. 92.25) ಸಾರ್ವಕಾಲಿಕ ದಾಖಲೆಯ ತೇರ್ಗಡೆ ಪ್ರಮಾಣ ದಾಖಲಾಗಿದೆ.

ಬ್ಯಾಗ್ ಹೊರೆ ಇಳಿಕೆ: ಪಠ್ಯಪುಸ್ತಕಗಳನ್ನು ಎರಡು ಭಾಗಗಳಾಗಿ ವಿಂಗಡಿಸುವ ಮೂಲಕ ಶಾಲಾ ಬ್ಯಾಗ್‌ಗಳ ತೂಕವನ್ನು ಶೇಕಡಾ 50 ರಷ್ಟು ಕಡಿತಗೊಳಿಸಲಾಗಿದೆ.

ಸಂವಿಧಾನದ ಓದು: ಮಕ್ಕಳಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಬಿತ್ತಲು ನಿತ್ಯ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಲಾಗಿದೆ.

‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಅಭಿಯಾನಕ್ಕೆ ಆಹ್ವಾನ

“ನಮ್ಮ ಗ್ರಾಮೀಣ ಭಾಗದ ಮಕ್ಕಳು ಬುದ್ಧಿವಂತರಿದ್ದಾರೆ. ಅವರಿಗೆ ಸರಿಯಾದ ವೇದಿಕೆ ಕಲ್ಪಿಸುವುದು ನಮ್ಮ ಜವಾಬ್ದಾರಿ,” ಎಂದು ತಿಳಿಸಿದ ಸಚಿವರು, ಉದ್ಯಮ ವಲಯದ ಸಹಕಾರಕ್ಕೂ ಕೋರಿದರು. ಇದಕ್ಕಾಗಿ ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಮಾರ್ಗಸೂಚಿಗಳನ್ನು (CSR Guidelines) ಬಿಡುಗಡೆ ಮಾಡಲಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ಖಾಸಗಿ ಪಾಲುದಾರರು ಮುಕ್ತವಾಗಿ ಕೈಜೋಡಿಸಬಹುದಾಗಿದೆ ಎಂದು ಮನವಿ ಮಾಡಿದರು.


Share this with Friends

Related Post