ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಚಲವಾದಿ ನಾರಾಯಣಸ್ವಾಮಿ ಅವರಿಗೆ ಆನ್ಲೈನ್ ಡೆಲಿವರಿ ಆ್ಯಪ್ ‘ಬ್ಲಿಂಕಿಟ್’ (Blinkit) ಮೂಲಕ ಮಾರಕಾಸ್ತ್ರಗಳನ್ನು ಕಳುಹಿಸಿ, ಅವರ ನಿವಾಸದ ಬಳಿ ಭಯದ ವಾತಾವರಣ ಸೃಷ್ಟಿಸಿರುವ ಕಾಂಗ್ರೆಸ್ ಹಾಗೂ ಎನ್ಎಸ್ಯುಐ (NSUI) ಕಾರ್ಯಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅಧಿಕೃತ ದೂರು ನೀಡಿದೆ.
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹಾಗೂ ಸಂತ್ರಸ್ತ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು ಜಂಟಿಯಾಗಿ ಸಹಿ ಮಾಡಿರುವ ದೂರು ಪತ್ರವನ್ನು ಶನಿವಾರ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಗಿದೆ.
ದೂರಿನ ವಿವರ:
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಅವರಿಗೆ ಹತ್ತಿರತ್ತಿರ ಇಪ್ಪತ್ತು ಮೊಬೈಲ್ ಸಂಖ್ಯೆಗಳ ಮೂಲಕ ಚಾಕು, ಚೂರಿಗಳಂತಹ ಅಪಾಯಕಾರಿ ವಸ್ತುಗಳನ್ನು ಆನ್ಲೈನ್ನಲ್ಲಿ ಬುಕ್ ಮಾಡಿ ಪಾರ್ಸಲ್ ಮೂಲಕ ಕಳುಹಿಸಲಾಗಿದೆ. ಈ ಪಾರ್ಸಲ್ಗಳು ತಲುಪುವ ಸಂದರ್ಭದಲ್ಲೇ ಎನ್ಎಸ್ಯುಐ ಸಂಘಟನೆಯ 8 ರಿಂದ 10 ಯುವಕರು ನಾರಾಯಣಸ್ವಾಮಿ ಅವರ ನಿವಾಸದ ಬಳಿ ಬಂದು, ಗೇಟ್ ಸುತ್ತಲೂ ಸುಳಿದಾಡುತ್ತಾ ತೀವ್ರ ಭಯದ ವಾತಾವರಣವನ್ನು ನಿರ್ಮಿಸಿದ್ದಾರೆ ಎಂದು ಬಿಜೆಪಿ ನಾಯಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಿರಿಯ ನಾಯಕರ ಕುಮ್ಮಕ್ಕು:
ಇಂತಹ ಗೂಂಡಾ ಸಂಸ್ಕೃತಿಯ ಕೃತ್ಯಗಳಲ್ಲಿ ತೊಡಗಲು ಎನ್ಎಸ್ಯುಐ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೇ ನೇರ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ. ಕೆಪಿಸಿಸಿ ಕಾರ್ಯದರ್ಶಿ ಮನೋಹರ್ ಮತ್ತು ಅವರ ಸಹಚರರು ಈಗಾಗಲೇ ನಾರಾಯಣಸ್ವಾಮಿ ಅವರ ನಿವಾಸದ ಮುಂದೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದು, ಸಚಿವರು ಹಾಗೂ ಹೈಕೋರ್ಟ್ ನ್ಯಾಯಾಧೀಶರ ಮನೆಗಳಿರುವ ಈ ಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಯತ್ನಿಸುತ್ತಿದ್ದಾರೆ ಎಂದು ದೂರಲಾಗಿದೆ.
‘ಬ್ಲಿಂಕಿಟ್’ ಪರವಾನಗಿ ರದ್ದತಿಗೆ ಆಗ್ರಹ:
ಆನ್ಲೈನ್ ಮೂಲಕ ಯಾವುದೇ ವಸ್ತುಗಳನ್ನು ಪಾರ್ಸಲ್ ಕೊಡುವ ಮುನ್ನ ಸುರಕ್ಷತಾ ತಪಾಸಣೆ ನಡೆಸಬೇಕಿರುವುದು ನಿಯಮ. ಆದರೆ, ಇಂತಹ ಯಾವುದೇ ಪರಿಶೀಲನೆ ನಡೆಸದೇ ಅಪಾಯಕಾರಿ ಮಾರಕಾಸ್ತ್ರಗಳನ್ನು ಸಾಗಿಸಲು ನೆರವಾದ ಆನ್ಲೈನ್ ಸಂಸ್ಥೆ ‘ಬ್ಲಿಂಕಿಟ್’ ನಡವಳಿಕೆಯನ್ನು ಬಿಜೆಪಿ ಪ್ರಶ್ನಿಸಿದೆ. ಈ ಬೇಜವಾಬ್ದಾರಿ ವರ್ತನೆಯ ಹಿನ್ನೆಲೆಯಲ್ಲಿ ಸಂಸ್ಥೆಯ ಪರವಾನಗಿಯನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಅಪಾಯಕಾರಿ ವಸ್ತುಗಳನ್ನು ಆರ್ಡರ್ ಮಾಡಲು ಬಳಸಲಾದ ವಿನಯ್ ಕುಮಾರ್ ಎಂ., ಉದಯ್ ಕುಮಾರ್ ಎಸ್. ಸೇರಿದಂತೆ ಹಲವರ ದೂರವಾಣಿ ಸಂಖ್ಯೆಗಳನ್ನು ದೂರಿನೊಂದಿಗೆ ಲಗತ್ತಿಸಲಾಗಿದ್ದು, ಈ ಘಟನೆಯ ಕುರಿತು ತಕ್ಷಣವೇ ಎಫ್ಐಆರ್ ದಾಖಲಿಸಿ, ತಪ್ಪಿತಸ್ಥರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

