Sun. Nov 8th, 2026

ಹಾಸನ ಜಿಲ್ಲಾಡಳಿತದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ: ಡಿಸಿ ಆಪ್ತನ ವಾಟ್ಸಾಪ್ ಚಾಟ್ ದಾಖಲೆ ಬಿಡುಗಡೆ ಮಾಡಿದ ಹೆಚ್.ಡಿ. ಕುಮಾರಸ್ವಾಮಿ

Share this with Friends

ಹಾಸನ: ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಲ್ಲು ಗಣಿಗಾರಿಕೆ (ಕ್ರಷರ್) ಪರವಾನಗಿ ಹಾಗೂ ಭೂ ಪರಿವರ್ತನೆ (ಕನ್ವರ್ಷನ್) ಪ್ರಕ್ರಿಯೆಗಳಲ್ಲಿ ಕೋಟ್ಯಂತರ ರೂಪಾಯಿ ಲಂಚದ ಸುಲಿಗೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ವ್ಯವಸ್ಥಿತ ಅಕ್ರಮ ಜಾಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಹಾಗೂ ಉನ್ನತ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದೂರಿದ ಅವರು, ಇದಕ್ಕೆ ಪೂರಕವಾಗಿರುವ ವಾಟ್ಸಾಪ್ ಚಾಟ್‌ನ ಆಘಾತಕಾರಿ ದಾಖಲೆಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.

ಶ್ರೀ ಹಾಸನಾಂಬೆಯ ದರ್ಶನ ಮುಗಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಮಾಣಿಕ ಅಧಿಕಾರಿಯೊಬ್ಬರು ತಮಗೆ ಈ ದಾಖಲೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಲತಾಕುಮಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ಎಂಬ ಮಧ್ಯವರ್ತಿಯ ಮೂಲಕ ಲಕ್ಷಾಂತರ ರೂಪಾಯಿ ಲಂಚದ ಚೌಕಾಸಿ ನಡೆಯುತ್ತಿರುವುದು ಈ ಚಾಟ್‌ನಿಂದ ಸಾಬೀತಾಗಿದೆ ಎಂದರು.

ಡಿಸಿ ನಿವಾಸದ ಪೊಲೀಸ್ ಚೌಕಿಯೇ ಲಂಚದ ಅಡ್ಡೆ!

“ಒಂದು ಕಡತದ ವಿಲೇವಾರಿಗೆ 60 ಲಕ್ಷ ಲಂಚ ನಿಗದಿಯಾಗಿದ್ದು, ಅದರಲ್ಲಿ 50 ಲಕ್ಷ ನೇರವಾಗಿ ಡಿಸಿಗೆ ಹಾಗೂ ಉಳಿದ ಹಣವನ್ನು ಅವರ ಆಪ್ತ ಸಿಬ್ಬಂದಿ, ವಾಹನ ಚಾಲಕ ಮತ್ತು ಗನ್‌ಮ್ಯಾನ್‌ಗೆ ಹಂಚಿಕೆ ಮಾಡಲಾಗುತ್ತಿದೆ. ಸಿಸಿಟಿವಿ ಕಣ್ಣು ತಪ್ಪಿಸಲು ಈ ಲಂಚದ ಹಣವನ್ನು ಜಿಲ್ಲಾಧಿಕಾರಿ ನಿವಾಸದ ಗೇಟ್ ಬಳಿ ಇರುವ ಪೊಲೀಸ್ ರೂಮ್‌ನಲ್ಲಿ ಇಡಲು ಸೂಚಿಸಲಾಗುತ್ತಿದೆ. ಇನ್ನು ಹಾಸನದ ಎಸಿ ಜಗದೀಶ್ 22 ಲಕ್ಷ ಹಾಗೂ ತಹಶೀಲ್ದಾರ್ ಗೀತಾ 13 ಲಕ್ಷ ಲಂಚ ಪಡೆದಿರುವ ಉಲ್ಲೇಖ ಚಾಟ್‌ನಲ್ಲಿದೆ. ರೈತರು ತಮ್ಮ ಜಮೀನಿನ ಕೆಲಸಕ್ಕಾಗಿ ಒಡವೆ ಮಾರಿ 50 ಲಕ್ಷ ಲಂಚ ಕೊಡುವ ದಾರುಣ ಸ್ಥಿತಿ ಹಾಸನದಲ್ಲಿದೆ” ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.

ವರ್ಗಾವಣೆ ತಡೆಯಲು ಸಚಿವರಿಗೆ 75 ಲಕ್ಷ ಡೀಲ್?

ಜಿಲ್ಲಾಧಿಕಾರಿಗಳನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರಿಗೆ ತಹಶೀಲ್ದಾರ್ ಸಂತೋಷ್ ಎಂಬುವವರ ಮೂಲಕ 75 ಲಕ್ಷ ನೀಡಲಾಗಿದೆ ಎಂಬ ಅಂಶವೂ ಚಾಟ್‌ನಲ್ಲಿ ಬಯಲಾಗಿದೆ ಎಂದು ಸಚಿವರು ಆರೋಪಿಸಿದರು. ಲಂಚ ಕೇಳುವವರ ವಿರುದ್ಧ ತಮಗೆ ದೂರು ನೀಡಿ ಎಂದು ಹೇಳುವ ಮುಖ್ಯಮಂತ್ರಿಗಳು, ಇಡೀ ಜಿಲ್ಲಾಡಳಿತವೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಸಾರ್ವಜನಿಕರು ಯಾರಿಗೆ ದೂರು ನೀಡಬೇಕು ಎಂದು ಪ್ರಶ್ನಿಸಿದ ಅವರು, ತಕ್ಷಣವೇ ಆರೋಪಿತ ಅಧಿಕಾರಿಗಳ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಬೆಲೆ ಏರಿಕೆ, ಗ್ಯಾರಂಟಿ ವೈಫಲ್ಯದ ವಿರುದ್ಧ ವಾಗ್ದಾಳಿ

ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆರ್ಥಿಕ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ನಂದಿನಿ ಹಾಲಿನ ಉತ್ಪನ್ನಗಳ ದರ ಏರಿಕೆಯಿಂದ ಗ್ರಾಹಕರು ಖಾಸಗಿ ಹಾಲಿನ ಕಡೆ ಮುಖ ಮಾಡುತ್ತಿದ್ದಾರೆ ಎಂದರು. “ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಉಚಿತ ಅಕ್ಕಿಯಿಂದಲೇ ರಾಜ್ಯ ಸರ್ಕಾರ ಉಸಿರಾಡುತ್ತಿದೆ. ಇತ್ತ ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ಹಣವನ್ನು ಬೇರೆಡೆಗೆ ವರ್ಗಾಯಿಸಿ ಮಹಿಳೆಯರಿಗೆ ವಂಚಿಸಲಾಗಿದೆ. ಡೀಸೆಲ್ ನೆಪ ಒಡ್ಡಿ ಸಾರಿಗೆ ದರವನ್ನು ಶೇ.33 ರಿಂದ 44 ರಷ್ಟು ಹೆಚ್ಚಿಸಿ ಜನಸಾಮಾನ್ಯರ ರಕ್ತ ಹೀರುತ್ತಿದ್ದಾರೆ” ಎಂದು ಹರಿಹಾಯ್ದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕ ಸ್ವರೂಪ ಪ್ರಕಾಶ್ ಉಪಸ್ಥಿತರಿದ್ದರು.

 


Share this with Friends

Related Post