ಮಾಸ್ಕೊ.ಮಾ.23 :: ರಷ್ಯಾ ರಾಜಧಾನಿ ಮಾಸ್ಕೋದ ಕ್ರೋಕಸ್ ಕನ್ಸರ್ಟ್ ಹಾಲ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 60 ಮಂದಿ ಸಾವನ್ನಪ್ಪಿದ್ದು, 145ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಗರದ ಉತ್ತರ ಭಾಗದಲ್ಲಿರುವ ಕ್ರೋಕಸ್ ಸಿಟಿ ಹಾಲ್ ಎಂಬ ಸಭಾಂಗಣದಲ್ಲಿ ನಡೆಯುತ್ತಿದ್ದ ರಾಕ್ ಮ್ಯೂಸಿಕ್ ಸಮ್ಮೇಳನವೊಂದರ ವೇಳೆ, ಸಭಾಂಗಣದೊಳಕ್ಕೆ ಏಕಾಏಕಿ ನುಗ್ಗಿದ ಬಂದೂಕುಧಾರಿಗಳು ಅಲ್ಲಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿರುವ ನಡೆದಿದೆ. ಈ ದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.
ದಾಳಿಕೋರರರು ಆಟೋಮ್ಯಾಟಿಕ್ ಮೆಷಿನ್ ಗನ್ ಗಳನ್ನು ಹೊಂದಿದ್ದರು ಎಂದು ರಷ್ಯಾದ ಸುದ್ದಿ ಸಂಸ್ಥೆಯಾದ ಟಾಸ್ ಮಾಡಿರುವ ವರದಿ ಹೇಳಿದೆ. ಗುಂಡಿನ ನಡೆಸುವುದರ ಜೊತೆಗೆ ಬಂದೂಕುಧಾರಿಗಳು ಬಾಂಬ್ ಗಳನ್ನೂ ಸಭಾಂಗಣದೊಳಗೆ ಸ್ಫೋಟಿಸಿದ್ದರಿಂದಾಗಿ ಇಡೀ ಸಭಾಂಗಣ ಹಾಗೂ ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ವ್ಯಾಪಿಸಿದೆ. ಉಗ್ರರ ದಾಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆಂದು ವರದಿಯಾಗಿದೆ.
ಭೀಕರ ದಾಳಿ ಖಂಡಿಸಿದ ಪ್ರಧಾನಿ ಮೋದಿ :
ರಷ್ಯಾ ರಾಜಧಾನಿ ಮಾಸ್ಕೋದ ಕ್ರೋಕಸ್ ಕನ್ಸರ್ಟ್ ಹಾಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ, ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಈ ದುಃಖದ ಸಮಯದಲ್ಲಿ ಭಾರತವು ರಷ್ಯಾದ ಒಕ್ಕೂಟದ ಸರ್ಕಾರ ಮತ್ತು ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದ್ದಾರೆ.
ಪುಟಿನ್ ಪ್ರತಿಕ್ರಿಯೆ :
ಇತ್ತ ದಾಳಿಗೆ ಸಂಬಂಧಪಟ್ಟಂತೆ ರಷ್ಯಾ ಅಧ್ಯಕ್ಷ ಪುಟಿನ್, ದಾಳಿಕೋರರು ತಕ್ಕ ಬೆಲೆ ತೆರಬೇಕಾಗುತ್ತದೆ. ಭಯೋತ್ಪಾದಕರನ್ನು ನಾವು ಸುಮ್ಮನೆ ಬಿಡಲ್ಲ ಎಂದು ದಾಳಿಯ ಹೊಣೆ ಹೊತ್ತ ಐಸಿಸ್‍ಗೆ ಎಚ್ಚರಿಕೆ ನೀಡಿದ್ದಾರೆ.