Mon. Nov 9th, 2026

ಲಂಚದ ಆರೋಪ ಸಾಬೀತುಪಡಿಸಿ, ಇಲ್ಲವೇ ಬಹಿರಂಗ ಕ್ಷಮೆ ಕೇಳಿ: ಎಚ್.ಡಿ. ಕುಮಾರಸ್ವಾಮಿಗೆ ಸಚಿವ ಕೆ.ಎಂ. ಶಿವಲಿಂಗೇಗೌಡ ಸವಾಲು

Share this with Friends

ಹಾಸನ: ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರು ವರ್ಗಾವಣೆ ತಪ್ಪಿಸಿಕೊಳ್ಳಲು ತಮಗೆ ಲಂಚ ನೀಡಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪವನ್ನು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, “ಆರೋಪವನ್ನು ದಾಖಲೆ ಸಹಿತ ಸಾಬೀತುಪಡಿಸಿ, ಇಲ್ಲದಿದ್ದರೆ ಹೇಳಿಕೆ ಹಿಂಪಡೆದು ಬಹಿರಂಗವಾಗಿ ಕ್ಷಮೆ ಕೇಳಿ” ಎಂದು ನೇರ ಸವಾಲು ಹಾಕಿದ್ದಾರೆ.

ವಾಟ್ಸಾಪ್ ಸಂಭಾಷಣೆಯ ಪ್ರತಿಗಳನ್ನು ಮುಂದಿಟ್ಟುಕೊಂಡು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವರು, “ಆ ಸಂಭಾಷಣೆಗಳ ನೈಜತೆಯ ಪರಿಶೀಲನೆಯಾಗಬೇಕು. ಯಾರೋ ನಡೆಸಿದ ಸಂಭಾಷಣೆಯಲ್ಲಿ ಹೆಸರು ಪ್ರಸ್ತಾಪವಾದ ತಕ್ಷಣ ಹಣದ ವ್ಯವಹಾರ ನಡೆದಿದೆ ಎಂದು ತೀರ್ಮಾನಿಸುವುದು ತಪ್ಪು. ನನಗೆ ಹಣ ನೀಡಿರುವುದಕ್ಕೆ ಆಧಾರವಿದ್ದರೆ ತನಿಖಾ ಸಂಸ್ಥೆಗಳ ಮುಂದೆ ಇಡಿ, ಸತ್ಯ ಏನೆಂಬುದು ಜನರಿಗೆ ತಿಳಿಯಲಿ. ಅದನ್ನು ಬಿಟ್ಟು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರವೃತ್ತಿಯನ್ನು ಬಿಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನಾಂಬೆ ಸನ್ನಿಧಿಯನ್ನು ರಾಜಕೀಯಕ್ಕೆ ಬಳಸಬೇಡಿ:

“ಹಾಸನಾಂಬಾ ದೇವಿಯ ಪವಿತ್ರ ಸನ್ನಿಧಿಯಲ್ಲಿ ನಿಂತು ಇಂತಹ ಸುಳ್ಳು ಆರೋಪಗಳನ್ನು ಮಾಡಬಾರದು. ದೇವಿಯ ಮೇಲೆ ಲಕ್ಷಾಂತರ ಭಕ್ತರು ಇಟ್ಟಿರುವ ಶ್ರದ್ಧೆಗೆ ಗೌರವ ಕೊಡಬೇಕು. ಧಾರ್ಮಿಕ ಉತ್ಸವವನ್ನು ರಾಜಕೀಯ ಅಪಪ್ರಚಾರದ ವೇದಿಕೆಯನ್ನಾಗಿ ಮಾಡಬೇಡಿ” ಎಂದು ಕುಮಾರಸ್ವಾಮಿ ಅವರಿಗೆ ಶಿವಲಿಂಗೇಗೌಡ ಕಿವಿಮಾತು ಹೇಳಿದ್ದಾರೆ. ಅಲ್ಲದೆ, ಹಾಸನಾಂಬಾ ಜಾತ್ರಾ ಮಹೋತ್ಸವದ ನಿರ್ವಹಣೆಯಲ್ಲಿ ಒಂದೇ ಒಂದು ಪೈಸೆಯೂ ಲೋಪವಾಗಲು ಬಿಡುವುದಿಲ್ಲ ಎಂದು ದೇವಿಯ ಪಾದದ ಮೇಲೆ ಆಣೆ ಮಾಡಿ ಹೇಳಲು ಸಿದ್ಧನಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಗಲು-ರಾತ್ರಿ ಪ್ರಾಮಾಣಿಕ ಸೇವೆ:

ಕಳೆದ 20 ದಿನಗಳಿಂದ ಮನೆಯಲ್ಲಿ ಮಲಗದೆ, ಹಾಸನದಲ್ಲೇ ಉಳಿದು ಹಗಲು–ರಾತ್ರಿ ಕೆಲಸ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳು ವಹಿಸಿರುವ ಜವಾಬ್ದಾರಿಯನ್ನು ಸಂಸದರೊಂದಿಗೆ ಸೇರಿ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ. ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿ ಜಾತ್ರೆಯನ್ನು ಯಶಸ್ವಿಗೊಳಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಆಡಳಿತದಲ್ಲಿ ಲೋಪವಿದ್ದರೆ ದಾಖಲೆ ಸಹಿತ ಪ್ರಶ್ನಿಸಿದರೆ ಉತ್ತರ ನೀಡಲು ಸಿದ್ಧನಿದ್ದೇನೆ. ಆದರೆ ಆಧಾರವಿಲ್ಲದೆ ನನ್ನ ಹಾಗೂ ಜಿಲ್ಲಾಧಿಕಾರಿಯವರ ಗೌರವಕ್ಕೆ ಧಕ್ಕೆ ತರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share this with Friends

Related Post