Wed. Nov 11th, 2026

ಕಲ್ಯಾಣ ಕರ್ನಾಟಕದ ಕೃಷಿ ಕ್ರಾಂತಿಗೆ ₹50 ಕೋಟಿ ಯೋಜನೆ: ‘ಕಲಬುರಗಿ ಬಯೋ-ಇಕಾನಮಿ ಮಿಷನ್’ ಪ್ರಸ್ತಾವನೆ

Share this with Friends

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಸ್ಥಳೀಯ ಜೈವಿಕ ಸಂಪನ್ಮೂಲಗಳಿಗೆ ವೈಜ್ಞಾನಿಕ ತಂತ್ರಜ್ಞಾನದ ಸ್ಪರ್ಶ ನೀಡಿ, ರೈತರ ಆದಾಯ ವೃದ್ಧಿಸುವ ಮತ್ತು ಗ್ರಾಮೀಣ ಉದ್ಯಮಗಳಿಗೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ 50 ಕೋಟಿ ಅಂದಾಜು ವೆಚ್ಚದ ‘ಕಲಬುರಗಿ ಬಯೋ-ಇಕಾನಮಿ ಮಿಷನ್ 2026’ ರೂಪಿಸಲು ಉದ್ದೇಶಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರು ಬಯೋಇನ್ನೋವೇಷನ್ ಸೆಂಟರ್ (BBC) ವತಿಯಿಂದ ಈ ಮೂರು ವರ್ಷಗಳ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಸೇರಿದಂತೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳನ್ನು ಈ ಮಿಷನ್ ಒಳಗೊಳ್ಳಲಿದ್ದು, ಕಲಬುರಗಿಯನ್ನು ಯೋಜನೆಯ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ತೊಗರಿ ಮತ್ತು ಕೆಂಪು ಬಾಳೆಗೆ ಮಾರುಕಟ್ಟೆ ಬಲ:

ಈ ಮಿಷನ್ ಅಡಿಯಲ್ಲಿ ಪ್ರಮುಖ ಆರು ಕಾರ್ಯಕ್ಷೇತ್ರಗಳನ್ನು ಗುರುತಿಸಲಾಗಿದೆ. ಕಲ್ಯಾಣ ಕರ್ನಾಟಕದ ಪ್ರಮುಖ ಬೆಳೆಯಾದ ತೊಗರಿಯನ್ನು ಕೇವಲ ಕಚ್ಚಾ ಉತ್ಪನ್ನವಾಗಿ ಮಾರಾಟ ಮಾಡದೆ, ಪ್ರೋಟೀನ್ ಬಾರ್, ಪೌಷ್ಟಿಕ ಪಾನೀಯ, ಅಧಿಕ ಪ್ರೋಟೀನ್ ಹಿಟ್ಟು ಹಾಗೂ ಸಿದ್ಧ ಆಹಾರ ಉತ್ಪನ್ನಗಳಾಗಿ ಪರಿವರ್ತಿಸಿ ಸ್ಥಳೀಯ ಆಹಾರ ಸಂಸ್ಕರಣೆಗೆ ಉತ್ತೇಜನ ನೀಡಲಾಗುವುದು.

ಅಲ್ಲದೆ, ಕಲಬುರಗಿಯ ವಿಶಿಷ್ಟ ಕೃಷಿ ಪರಂಪರೆಯಾದ ‘ಕಮಲಾಪುರ ಕೆಂಪು ಬಾಳೆ’ ತಳಿಯನ್ನು ಅಂಗಾಂಶ ಕೃಷಿ (Tissue Culture) ತಂತ್ರಜ್ಞಾನದ ಮೂಲಕ ಸಂರಕ್ಷಿಸಿ, ತಿಂಗಳಿಗೆ 2 ರಿಂದ 3 ಲಕ್ಷ ಗುಣಮಟ್ಟದ ಸಸಿಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. ಜೊತೆಗೆ, ತೊಗರಿಯ ಬಾಡುವಿಕೆ ರೋಗ ಹಾಗೂ ಮೆಣಸಿನಕಾಯಿ ಬೆಳೆಯ ಕೀಟ-ರೋಗ ನಿಯಂತ್ರಣಕ್ಕೆ ಜೈವಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸಿ ರಾಸಾಯನಿಕ ಬಳಕೆಯನ್ನು ತಗ್ಗಿಸಲಾಗುವುದು.

ಕೈಗಾರಿಕಾ ಪಾರ್ಕ್ ಮತ್ತು ಬಯೋಬ್ಯಾಂಕ್:

ಕಲಬುರಗಿಯಲ್ಲಿ ಸಮಗ್ರ ಜೈವಿಕ ಆರ್ಥಿಕ ಕೈಗಾರಿಕಾ ಪಾರ್ಕ್ ಸ್ಥಾಪಿಸಿ, ಅಲ್ಲಿ ಸಂಶೋಧನೆ, ಆಹಾರ ಸಂಸ್ಕರಣೆ, ಗುಣಮಟ್ಟ ಪರೀಕ್ಷೆ ಹಾಗೂ ನವೋದ್ಯಮಗಳಿಗೆ ಇನ್‌ಕ್ಯುಬೇಷನ್ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಸ್ಥಳೀಯ ಸೂಕ್ಷ್ಮಜೀವಿಗಳ ಸಂರಕ್ಷಣೆಗಾಗಿ ಪ್ರಾದೇಶಿಕ ಮೈಕ್ರೋಬಿಯಲ್ ಬಯೋಬ್ಯಾಂಕ್ ಸ್ಥಾಪಿಸಿ, ಮಣ್ಣಿನ ಆರೋಗ್ಯ ವೃದ್ಧಿಗೆ ಸಂಶೋಧನೆ ನಡೆಸಲಾಗುವುದು. ರೈತ ಉತ್ಪಾದಕ ಸಂಸ್ಥೆಗಳು (FPOs), ಮಹಿಳೆಯರು ಮತ್ತು ಯುವ ಉದ್ಯಮಿಗಳಿಗೆ ತರಬೇತಿ, ಮಾರುಕಟ್ಟೆ ಸಂಪರ್ಕ ಹಾಗೂ ರಫ್ತು ಸಿದ್ಧತೆಗೆ ನೆರವು ನೀಡುವ ಯೋಜನೆಯೂ ಇದರಲ್ಲಿದೆ.

ಪ್ರಸ್ತುತ ಈ ಯೋಜನೆಯು ಪ್ರಸ್ತಾವನೆಯ ಹಂತದಲ್ಲಿದ್ದು, ವಿವರವಾದ ಯೋಜನಾ ವರದಿ (DPR), ಕಾರ್ಯಸಾಧ್ಯತಾ ಅಧ್ಯಯನ ಹಾಗೂ ರಾಜ್ಯ ಸರ್ಕಾರದ ಅನುಮೋದನೆಯ ಬಳಿಕ ಅನುಷ್ಠಾನಗೊಳ್ಳಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.

 


Share this with Friends

Related Post