ಮೈಸೂರು: ಭಾರತದಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮದ ಪರಂಪರೆ ಸದಾ ಜೊತೆಯಾಗಿ ಬೆಳೆದುಬಂದಿವೆ. ಆಧ್ಯಾತ್ಮವು ನಮ್ಮ ಅಂತರಂಗವನ್ನು ನೋಡುವಂತೆ ಪ್ರೇರೇಪಿಸಿದರೆ, ಬ್ರಹ್ಮಾಂಡದ ಅಧ್ಯಯನವು ನಮ್ಮ ದೃಷ್ಟಿಯನ್ನು ಆಕಾಶದತ್ತ ಹರಿಸುವಂತೆ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ವಿಶ್ವದ ಮೊದಲ ಟಿಲ್ಟೆಡ್ ಎಲ್ಇಡಿ ಡೋಮ್ ತಾರಾಲಯವಾದ ‘ಕಾಸ್ಮೋಸ್-ಮೈಸೂರು’ (COSMOS–Mysuru) ಅನ್ನು ಶುಕ್ರವಾರ ರಾಷ್ಟ್ರಕ್ಕೆ ಸಮರ್ಪಿಸಿ ಅವರು ಮಾತನಾಡಿದರು.
ಒಡೆಯರ್ ಕೊಡುಗೆ ಮತ್ತು ಖಗೋಳ ಪರಂಪರೆ ಸ್ಮರಣೆ:
ಜ್ಞಾನ ಮತ್ತು ಸಂಶೋಧನೆಗೆ ಪ್ರೋತ್ಸಾಹ ನೀಡುವ ಸಂಸ್ಥೆಗಳನ್ನು ಕಟ್ಟಿದ ಕೀರ್ತಿ ಮೈಸೂರಿಗೆ ಸಲ್ಲುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಯಿತು ಹಾಗೂ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (IISc) ಆರಂಭವಾಗಲು ಒಡೆಯರ್ ಕುಟುಂಬ ಮಹತ್ವದ ಪಾತ್ರ ವಹಿಸಿತ್ತು ಎಂದು ಮೋದಿ ಸ್ಮರಿಸಿದರು. ಇಂದಿನಂತಹ ಆಧುನಿಕ ಉಪಕರಣಗಳಿಲ್ಲದ ಕಾಲದಲ್ಲೇ ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯರಂತಹ ಭಾರತೀಯ ಖಗೋಳ ವಿಜ್ಞಾನಿಗಳು ಗ್ರಹಣಗಳ ನಿಖರ ಲೆಕ್ಕಾಚಾರ ಹಾಕಿದ್ದರು ಎಂದು ಪ್ರಶಂಸಿಸಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಜಿಗಿತ:
ಕಳೆದ ಒಂದು ದಶಕದಲ್ಲಿ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಚಂದ್ರಯಾನ-3 ಯೋಜನೆಯ ಮೂಲಕ ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ. ಆದಿತ್ಯ ಎಲ್-1 ಸೌರ ವೀಕ್ಷಣಾಲಯ, ಬಾಹ್ಯಾಕಾಶ ಡಾಕಿಂಗ್ ಸಾಮರ್ಥ್ಯ ಹಾಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತೀಯ ಗಗನಯಾತ್ರಿಯ ಪ್ರಯೋಗಗಳು ಮುಂಬರುವ ‘ಗಗನಯಾನ’ ಯೋಜನೆಗೆ ಬಲ ತುಂಬಿವೆ ಎಂದರು.
ಸ್ಟಾರ್ಟ್ಅಪ್ಗಳು ಮತ್ತು ಸಂಶೋಧನೆಗೆ ಉತ್ತೇಜನ:
ಮಾಜಿ ಪ್ರಧಾನಿ ವಾಜಪೇಯಿ ಅವರು ‘ಜೈ ವಿಜ್ಞಾನ್’ ಸೇರಿಸಿದರೆ, 21ನೇ ಶತಮಾನದ ಭಾರತಕ್ಕೆ ನಾನು ‘ಜೈ ಅನುಸಂಧಾನ್’ (ಸಂಶೋಧನೆ) ಘೋಷಣೆಯನ್ನು ಸೇರಿಸಿದ್ದೇನೆ ಎಂದು ಪ್ರಧಾನಿ ಹೇಳಿದರು. ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿರುವುದರಿಂದ ಯುವ ಉದ್ಯಮಿಗಳು ಸ್ವಂತ ರಾಕೆಟ್ ಮತ್ತು ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದ್ದಾರೆ. ಸಂಶೋಧನೆಗೆ ಪೂರಕವಾಗಿ ₹1 ಲಕ್ಷ ಕೋಟಿ ಮೊತ್ತದ ಸಂಶೋಧನೆ ಮತ್ತು ನಾವೀನ್ಯತಾ ನಿಧಿ, ‘ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಷನ್’ ಹಾಗೂ ‘ಒಂದು ರಾಷ್ಟ್ರ, ಒಂದು ಚಂದಾದಾರಿಕೆ’ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.
ಅಂತಾರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್ಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದು ದಾಖಲೆ ಬರೆಯುತ್ತಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಸ್ಮೋಸ್ ತಾರಾಲಯಕ್ಕೆ ಭೇಟಿ ನೀಡುವಂತೆ ಆಡಳಿತ ಮಂಡಳಿ ವ್ಯವಸ್ಥೆ ಕಲ್ಪಿಸಬೇಕು. ಇಲ್ಲಿ ಬ್ರಹ್ಮಾಂಡದ ವಿಸ್ಮಯ ಕಂಡ ಮಕ್ಕಳು ಭವಿಷ್ಯದಲ್ಲಿ ಶ್ರೇಷ್ಠ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದು ಮೋದಿ ಆಶಿಸಿದರು.

