Fri. Nov 13th, 2026

ತುಂಗಭದ್ರಾ ಕಾಲುವೆಗಳಿಗೆ ನ.20ರವರೆಗೆ ನೀರು; ಆಂಧ್ರ ಒಪ್ಪಿದರೆ ನ.30ರವರೆಗೆ ವಿಸ್ತರಣೆ: ಸಚಿವ ಶಿವರಾಜ್ ತಂಗಡಗಿ

Share this with Friends

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ರಾಜ್ಯದ ಪಾಲಿನ 7 ಟಿಎಂಸಿ ನೀರಿನಲ್ಲಿ ಪೂರ್ವನಿರ್ಧಾರದಂತೆ ನವೆಂಬರ್ 20ರವರೆಗೆ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹಿತದೃಷ್ಟಿಯಿಂದ ನವೆಂಬರ್ 30ರವರೆಗೂ ನೀರು ಹರಿಸಲು ಪ್ರಯತ್ನಿಸಲಾಗುತ್ತಿದೆ. ಆಂಧ್ರಪ್ರದೇಶದ ನದಿ ಸಹಾಯ ಕೋಟಾದಡಿ ಹಂಚಿಕೆಯಾಗಿರುವ 5 ಟಿಎಂಸಿ ನೀರಿನಲ್ಲಿ ಈಗಾಗಲೇ 1 ಟಿಎಂಸಿ ನದಿಗೆ ಹರಿಸಲಾಗಿದೆ. ಉಳಿದ 4 ಟಿಎಂಸಿ ನೀರನ್ನು ರಾಜ್ಯದ ಕಾಲುವೆಗಳಿಗೆ ಬಳಸಿಕೊಳ್ಳಲು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತುಕತೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಶುಭ ಸುದ್ದಿ ಸಿಗುವ ವಿಶ್ವಾಸವಿದೆ ಎಂದರು.

ಕೇಂದ್ರದ ಅನುದಾನದ ಬಗ್ಗೆ ದಾಖಲೆ ಕೇಳಿದ ಸಚಿವರು:

ಇದೇ ವೇಳೆ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ತಂಗಡಗಿ, ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಪಾಲು, ಜಿಎಸ್‌ಟಿ ಪರಿಹಾರ ಹಾಗೂ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ನಿರಂತರ ಅನ್ಯಾಯ ಮಾಡುತ್ತಿದೆ. ಬೆಂಗಳೂರಿನ ಅಭಿವೃದ್ಧಿಗೆ ಹಣ ನೀಡಿದ್ದೇವೆ ಎನ್ನುವ ಬಿಜೆಪಿ ನಾಯಕರು, ಸಾಲದ ರೂಪದಲ್ಲಿ ನೀಡಿದ ಮೊತ್ತವನ್ನು ಅನುದಾನವೆಂದು ಬಿಂಬಿಸುತ್ತಿದ್ದಾರೆ. ತಾಕತ್ತಿದ್ದರೆ ಯಾವ ಯೋಜನೆಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ ಎಂಬ ಸರ್ಕಾರಿ ಆದೇಶದ ಪ್ರತಿಯನ್ನು ಬಹಿರಂಗಪಡಿಸಲಿ ಎಂದು ಸವಾಲೆಸೆದರು.

ಕಳೆದ 13 ವರ್ಷಗಳ ಆಡಳಿತದಲ್ಲಿ ಕೇಂದ್ರ ಸರ್ಕಾರ ರೈತರಿಗಾಗಿ ಯಾವ ಹೊಸ ಅಣೆಕಟ್ಟು ನಿರ್ಮಿಸಿದೆ ಮತ್ತು ಕಾರ್ಮಿಕರಿಗೆ ಏನು ಕೊಡುಗೆ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ ಶೇ.24.1ರಷ್ಟು ಅನುದಾನ ಮೀಸಲಿಡುವ ಕಾಯ್ದೆಯನ್ನು ನಾವು ಜಾರಿಗೆ ತಂದಿದ್ದೇವೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಬಿಜೆಪಿಯವರು ಇಂತಹ ಕಾಯ್ದೆಯನ್ನು ದೇಶಾದ್ಯಂತ, ಕನಿಷ್ಠ ಗುಜರಾತ್‌ನಲ್ಲಾದರೂ ಜಾರಿಗೆ ತರುವ ಧೈರ್ಯ ತೋರಲಿ ಎಂದು ಆಗ್ರಹಿಸಿದರು.

 


Share this with Friends

Related Post