Fri. Nov 13th, 2026

ಗ್ರಾಮಾಭಿವೃದ್ಧಿ ಯೋಜನೆಗಳಲ್ಲಿ ಮಕ್ಕಳ ಬೇಡಿಕೆಗಳಿಗೆ ಆದ್ಯತೆ ನೀಡಿ: ಸಚಿವ ಈಶ್ವರ ಖಂಡ್ರೆ

Share this with Friends

ಬೆಂಗಳೂರು: ಗ್ರಾಮದ ಹಿರಿಯರ ಮಾತುಗಳಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಮಕ್ಕಳ ಅಭಿಪ್ರಾಯಗಳಿಗೂ ನೀಡಿ, ಅವರ ಬೇಡಿಕೆಗಳನ್ನು ಗ್ರಾಮಾಭಿವೃದ್ಧಿ ಯೋಜನೆಗಳಲ್ಲಿ ಸೇರ್ಪಡೆಗೊಳಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಜಕ್ಕೂರಿನಲ್ಲಿರುವ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ‘ಮಕ್ಕಳ ಗ್ರಾಮಸಭೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳು ಕೇವಲ ಭವಿಷ್ಯದ ಪ್ರಜೆಗಳಲ್ಲ, ಅವರು ಇಂದಿನ ನಾಗರಿಕರೂ ಹೌದು ಎಂದು ಅಭಿಪ್ರಾಯಪಟ್ಟರು.

10 ವಾರಗಳ ಕಾಲ ರಾಜ್ಯವ್ಯಾಪಿ ಅಭಿಯಾನ:

ರಾಜ್ಯದ ಒಟ್ಟು 5,927 ಗ್ರಾಮ ಪಂಚಾಯಿತಿಗಳಲ್ಲಿ ಜನವರಿ 24ರವರೆಗೆ 10 ವಾರಗಳ ಕಾಲ ನಿರಂತರವಾಗಿ ಮಕ್ಕಳ ಗ್ರಾಮಸಭೆಗಳು ಜರುಗಲಿವೆ. ಈ ಸಭೆಗಳಲ್ಲಿ ಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯ, ನೈರ್ಮಲ್ಯ ಮತ್ತು ಪರಿಸರ ಸಂರಕ್ಷಣೆಯ ಜೊತೆಗೆ ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲಾಗುವುದು. ಶಾಲೆಗಳಲ್ಲಿನ ಶೌಚಾಲಯ, ಕುಡಿಯುವ ನೀರು ಹಾಗೂ ಆಟದ ಮೈದಾನದಂತಹ ಮೂಲಭೂತ ಸಮಸ್ಯೆಗಳ ಬಗ್ಗೆ ಮಕ್ಕಳು ಮುಕ್ತವಾಗಿ ಚರ್ಚಿಸಲು ವೇದಿಕೆ ಕಲ್ಪಿಸಬೇಕು ಮತ್ತು ಅವರ ಬೇಡಿಕೆಗಳನ್ನು ಪಂಚಾಯಿತಿ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಪರಿಸರ ಜಾಗೃತಿ ಹಾಗೂ ಪಾರಂಪರಿಕ ಗ್ರಾಮ ವೀಕ್ಷಣೆ:

ಕಾರ್ಯಕ್ರಮದ ಭಾಗವಾಗಿ ಸಚಿವರು ಮಕ್ಕಳೊಂದಿಗೆ ಜಕ್ಕೂರಿನ ಮಾದರಿ ಪಾರಂಪರಿಕ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮೀಣ ಸಂಸ್ಕೃತಿ, ಕೃಷಿ ಹಾಗೂ ಹಿಂದಿನ ಕಾಲದ ಜೀವನಶೈಲಿಯ ಪರಿಚಯ ಮಾಡಿಕೊಟ್ಟರು. ಮಕ್ಕಳಿಂದ ಪ್ರದರ್ಶಿಸಲ್ಪಟ್ಟ ಅಣಕು ಗ್ರಾಮಸಭೆಯನ್ನು ವೀಕ್ಷಿಸಿದ ಅವರು, ನೀರಿನ ಮಿತಬಳಕೆ, ಗಿಡ ನೆಡುವುದು ಹಾಗೂ ಏಕಬಳಕೆ ಪ್ಲಾಸ್ಟಿಕ್ ತ್ಯಜಿಸುವ ಕುರಿತು ಕಿವಿಮಾತು ಹೇಳಿದರು.

ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಶಿಕ್ಷಣ, ವಿಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ ಸಚಿವರು, ಮಕ್ಕಳಲ್ಲಿ ಕೇವಲ ಪಠ್ಯ ಶಿಕ್ಷಣವಷ್ಟೇ ಅಲ್ಲದೆ ನಾಯಕತ್ವ ಗುಣ, ಸೃಜನಶೀಲತೆ ಮತ್ತು ಪ್ರಶ್ನಿಸುವ ಮನೋಭಾವವನ್ನು ಬೆಳೆಸುವ ಅಗತ್ಯವಿದೆ ಎಂದರು.

 


Share this with Friends

Related Post