ಯಾದಗಿರಿ: ಸಮಾಜದಲ್ಲಿ ಜಾತಿ ಹಾಗೂ ಧರ್ಮಗಳ ನಡುವೆ ದ್ವೇಷದ ವಿಷಬೀಜ ಬಿತ್ತುವವರೇ ನಿಜವಾದ ದೇಶದ್ರೋಹಿಗಳು. ಸ್ವತಂತ್ರ ಭಾರತಕ್ಕೆ ಸಂವಿಧಾನವೇ ಅತ್ಯುನ್ನತ ಶಕ್ತಿಯಾಗಿದ್ದು, ಸಾಮಾಜಿಕ ನ್ಯಾಯದ ಪರವಾದ ನನ್ನ ಹೋರಾಟದಲ್ಲಿ ಯಾರಿಗೂ ಜಗ್ಗುವ ಅಥವಾ ಬಗ್ಗುವ ಪ್ರಶ್ನೆಯೇ ಇಲ್ಲ ಎಂದು ಗೃಹ, ಐಟಿಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, 2023-24ನೇ ಸಾಲಿನ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಸುಮಾರು ₹31 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಆರೆಸ್ಸೆಸ್ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ:
1949ರಲ್ಲಿ ಸಂವಿಧಾನದ ಬದಲಿಗೆ ಮನುಸ್ಮೃತಿ ಜಾರಿಯಾಗಬೇಕೆಂದು ಮನುವಾದಿ ಸಂಘಟನೆಗಳು 150 ಬಾರಿ ಪ್ರತಿಭಟಿಸಿದ್ದವು ಎಂದು ಆರೋಪಿಸಿದ ಸಚಿವರು, ದಲಿತ ಸಂಘಟನೆಗಳಂತೆ ಆರೆಸ್ಸೆಸ್ ಇನ್ನೂ ನೋಂದಾಯಿತ ಸಂಘಟನೆಯಾಗಿಲ್ಲ. ಮುಂದಿನ ದಿನಗಳಲ್ಲಿ ಆರೆಸ್ಸೆಸ್ಗೂ ನೋಂದಣಿ ಮಾಡಿಸಲಿದ್ದೇನೆ ಎಂದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದವರು ಇಂದು ಗಾಂಧೀಜಿ ಹಂತಕನನ್ನು ಪೂಜಿಸುತ್ತಿದ್ದಾರೆ ಎಂದು ಟೀಕಿಸಿದ ಅವರು, ಬಿಜೆಪಿಯವರಿಗೆ ನನ್ನ ಉಡುಪು ಸಮಸ್ಯೆಯಲ್ಲ, ಬದಲಾಗಿ ಅನ್ಯಾಯದ ವಿರುದ್ಧದ ನನ್ನ ಧ್ವನಿಯೇ ದೊಡ್ಡ ಸಮಸ್ಯೆಯಾಗಿದೆ ಎಂದು ವ್ಯಂಗ್ಯವಾಡಿದರು.
ದಲಿತ ಸಮುದಾಯದ ವ್ಯಕ್ತಿಯೊಬ್ಬರು ವಿಶ್ವದ ನಾಲ್ಕನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕೇಂದ್ರವನ್ನು ಮುನ್ನಡೆಸುತ್ತಿರುವುದನ್ನು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಆಹ್ವಾನಿಸದಿರುವುದು ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಸ್ವಚ್ಛಗೊಳಿಸಿರುವುದು ಇವರ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಟ್ಸ್ಆ್ಯಪ್ ಮಾಹಿತಿ ಬಿಟ್ಟು ಇತಿಹಾಸ ಓದಿ:
ಯುವಜನತೆ ಕೇವಲ ವಾಟ್ಸ್ಆ್ಯಪ್ ವಿಶ್ವವಿದ್ಯಾಲಯದ ಮಾಹಿತಿಗಳನ್ನು ನಂಬದೆ, ಅಧಿಕೃತ ಪುಸ್ತಕಗಳು ಮತ್ತು ಇತಿಹಾಸವನ್ನು ಅಧ್ಯಯನ ಮಾಡಿ ಚರ್ಚಿಸಬೇಕು ಎಂದು ಖರ್ಗೆ ಕಿವಿಮಾತು ಹೇಳಿದರು. ಅಂಬೇಡ್ಕರ್ ಅವರ ಚುನಾವಣಾ ಸೋಲಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ದಾಖಲೆ ಸಂಗ್ರಹಾಗಾರದಲ್ಲಿರುವ ಪತ್ರದ ವಿಚಾರವನ್ನು ಸದನದಲ್ಲಿ ದಾಖಲೆ ಸಮೇತ ಪ್ರಸ್ತಾಪಿಸಿರುವುದಾಗಿ ಅವರು ತಿಳಿಸಿದರು.
ವ್ಯಕ್ತಿಪೂಜೆಗಿಂತ ತತ್ವಗಳ ಪಾಲನೆ ಮುಖ್ಯ:
ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ಥಾಪಿಸುವುದರ ಜೊತೆಗೆ ಅವರ ಆದರ್ಶಗಳನ್ನು ನಿಜಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾರ, ಶಾಲುಗಳ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರೆ ಅವುಗಳನ್ನು ಅರಿವು ಕೇಂದ್ರಗಳಿಗೆ ತಲುಪಿಸಲಾಗುವುದು ಎಂದು ತಿಳಿಸಿದ ಸಚಿವರು, ಯಾದಗಿರಿ ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಹೊಸ ಪೊಲೀಸ್ ಠಾಣೆಗಳನ್ನು ಆರಂಭಿಸುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

