Sat. Nov 14th, 2026

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಿ:ಪ್ರಧಾನಿ ಮೋದಿಗೆ ಡಿಸಿಎಂ ಡಾ. ಜಿ. ಪರಮೇಶ್ವರ ಪತ್ರ

Share this with Friends

ಬೆಂಗಳೂರು: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಕಾಯ್ದೆಗೆ ಸಂವಿಧಾನಾತ್ಮಕ ರಕ್ಷಣೆ ಒದಗಿಸಲು, ಅದನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರ್ಪಡೆಗೊಳಿಸುವಂತೆ ಕೋರಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಸಚಿವ ಡಾ. ವೀರೇಂದ್ರ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

2011ರ ಜನಗಣತಿ ಹಾಗೂ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ಶಿಫಾರಸಿನ ಅನ್ವಯ ರಾಜ್ಯ ಸರ್ಕಾರವು ಎಸ್‌ಸಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿ 2022ರಲ್ಲಿ ಕಾಯ್ದೆ ರೂಪಿಸಿತ್ತು. ಆದರೆ ಒಟ್ಟು ಮೀಸಲಾತಿ ಶೇ.56ಕ್ಕೆ ತಲುಪುವುದರಿಂದ ಶೇ.50ರ ಮಿತಿ ಮೀರಿದಂತಾಗುತ್ತದೆ ಎಂಬ ಕಾರಣಕ್ಕೆ ಕರ್ನಾಟಕ ಹೈಕೋರ್ಟ್ 2026ರ ಅಕ್ಟೋಬರ್ 12ರಂದು ಈ ನಿಬಂಧನೆಗಳನ್ನು ರದ್ದುಗೊಳಿಸಿದೆ. ಇದರ ವಿರುದ್ಧ ರಾಜ್ಯ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ತಮಿಳುನಾಡು ಮಾದರಿಯಲ್ಲಿ ಸಂವಿಧಾನ ತಿದ್ದುಪಡಿಗೆ ಆಗ್ರಹ:

ತಮಿಳುನಾಡಿನ ಶೇ.69ರ ಮೀಸಲಾತಿಗೆ 1994ರಲ್ಲಿ ಸಂವಿಧಾನದ 76ನೇ ತಿದ್ದುಪಡಿ ಮೂಲಕ 9ನೇ ಅನುಸೂಚಿಯ ರಕ್ಷಣೆ ನೀಡಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದ ಶೇ.56ರ ಮೀಸಲಾತಿ ಕಾಯ್ದೆಗೂ ರಕ್ಷಣೆ ನೀಡಬೇಕು. ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದೆ ಎಂಬ ಕಾರಣ ನೀಡಿ ಸಾಮಾಜಿಕ ನ್ಯಾಯವನ್ನು ಅನಿರ್ದಿಷ್ಟಾವಧಿಗೆ ಮುಂದೂಡಬಾರದು ಎಂದು ಪರಮೇಶ್ವರ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ಹಿಂದೆ 2023ರಲ್ಲಿ ಪ್ರಸ್ತಾವನೆ ಸಲ್ಲಿಸಿ, 2025ರ ಡಿಸೆಂಬರ್‌ನಲ್ಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಅಲ್ಲದೆ 2026ರ ಏಪ್ರಿಲ್‌ನಲ್ಲಿ ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದರೂ ಕೇಂದ್ರದಿಂದ ಕ್ರಮವಾಗಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.

ಪತ್ರದಲ್ಲಿ ಮಂಡಿಸಲಾದ ಪ್ರಮುಖ ಬೇಡಿಕೆಗಳು:

ಕರ್ನಾಟಕದ ಎಸ್‌ಸಿ (ಶೇ.17) ಮತ್ತು ಎಸ್‌ಟಿ (ಶೇ.7) ಮೀಸಲಾತಿ ಹೆಚ್ಚಳ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಬೇಕು.

ಇದಕ್ಕೆ ಪೂರಕವಾಗಿ ಸಂಸತ್ತಿನಲ್ಲಿ ತುರ್ತಾಗಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಬೇಕು.

ರಾಷ್ಟ್ರೀಯ ಎಸ್‌ಸಿ ಮತ್ತು ಎಸ್‌ಟಿ ಆಯೋಗಗಳೊಂದಿಗೆ ಸಮಾಲೋಚಿಸಿ ನ್ಯಾಯಾಲಯ ಗುರುತಿಸಿರುವ ತಾಂತ್ರಿಕ ಹಾಗೂ ಸಂವಿಧಾನಾತ್ಮಕ ಅಡೆತಡೆಗಳನ್ನು ನಿವಾರಿಸಬೇಕು.

ಗೃಹ, ಕಾನೂನು ಹಾಗೂ ಸಾಮಾಜಿಕ ನ್ಯಾಯ ಸಚಿವಾಲಯಗಳು ಸಮನ್ವಯದಿಂದ ಕಾಲಮಿತಿಯೊಳಗೆ ನಿರ್ಧಾರ ಕೈಗೊಳ್ಳಬೇಕು.

ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಶೇ.50ರ ಮೀಸಲಾತಿ ಮಿತಿಯ ಕುರಿತು ರಾಷ್ಟ್ರಮಟ್ಟದಲ್ಲಿ ಮರುಪರಿಶೀಲನೆ ಮತ್ತು ವ್ಯಾಪಕ ಚರ್ಚೆ ನಡೆಸಬೇಕು.

ಸಾಮಾಜಿಕ ನ್ಯಾಯದ ವಿಚಾರವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿದ್ದಾಗಿದ್ದು, ಅವಕಾಶವಂಚಿತ ಸಮುದಾಯಗಳ ಶೈಕ್ಷಣಿಕ ಹಾಗೂ ಉದ್ಯೋಗಾವಕಾಶಗಳನ್ನು ರಕ್ಷಿಸಲು ಪ್ರಧಾನಿಯವರು ಖುದ್ದು ಮಧ್ಯಪ್ರವೇಶಿಸಬೇಕು ಎಂದು ಡಿಸಿಎಂ ಮನವಿ ಮಾಡಿದ್ದಾರೆ.

 


Share this with Friends

Related Post