Sat. Nov 14th, 2026

ನಮ್ಮ ಮೆಟ್ರೋ ‘ಪಿಂಕ್ ಲೈನ್’ ಸಂಚಾರ ಆರಂಭ; ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಸಚಿವ ಕೃಷ್ಣ ಬೈರೇಗೌಡ

Share this with Friends

ಬೆಂಗಳೂರು: ಬೆಂಗಳೂರಿಗರ ಬಹುನಿರೀಕ್ಷಿತ ನಮ್ಮ ಮೆಟ್ರೋದ ‘ಪಿಂಕ್ ಲೈನ್’ (ಗುಲಾಬಿ ಮಾರ್ಗ) ಸಾರ್ವಜನಿಕ ಸಂಚಾರಕ್ಕೆ ಶನಿವಾರ ಬೆಳಿಗ್ಗೆ ಅಧಿಕೃತವಾಗಿ ಮುಕ್ತವಾಗಿದೆ. ಮೊದಲ ದಿನದ ಸಂಚಾರದ ಪ್ರಯುಕ್ತ ಬೆಂಗಳೂರು ನಗರಾಭಿವೃದ್ಧಿ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬೆಳ್ಳಂಬೆಳಗ್ಗೆ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ, ಪ್ರಯಾಣಿಕರಿಗೆ ಗುಲಾಬಿ ಹೂಗಳನ್ನು ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.

ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಕಾಳೇನ ಅಗ್ರಹಾರದಿಂದ ಎಸ್.ಜಿ. ಪಾಳ್ಯ (ತಾವರೆಕೆರೆ/ಸುದ್ದುಗುಂಟೆಪಾಳ್ಯ) ನಡುವಿನ 7.5 ಕಿ.ಮೀ. ಎತ್ತರಿಸಿದ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಯಿತು. ಸಚಿವ ಕೃಷ್ಣ ಬೈರೇಗೌಡ ಅವರು ಮೆಟ್ರೋ ಅಧಿಕಾರಿಗಳೊಂದಿಗೆ ಕಾಳೇನ ಅಗ್ರಹಾರದಿಂದ ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣದವರೆಗೆ ಚೊಚ್ಚಲ ಪ್ರಯಾಣ ಕೈಗೊಂಡು ಸೇವೆಯ ಸುಗಮ ಕಾರ್ಯಾಚರಣೆಯನ್ನು ಪರಿಶೀಲಿಸಿದರು.

ಪ್ರಯಾಣಿಕರೊಂದಿಗೆ ಸಂವಾದ ಮತ್ತು ಸಂಭ್ರಮ:

ಎಸ್.ಜಿ. ಪಾಳ್ಯ ಸೇರಿದಂತೆ ನಿಲ್ದಾಣಗಳಲ್ಲಿ ನೆರೆದಿದ್ದ ಮೊದಲ ದಿನದ ಪ್ರಯಾಣಿಕರಿಗೆ ಸಚಿವರು ಗುಲಾಬಿ ಹೂವುಗಳನ್ನು ವಿತರಿಸಿ ಶುಭ ಕೋರಿದರು. ಈ ವೇಳೆ ಪ್ರಯಾಣಿಕರು ಸಚಿವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, “ಬೆಳಿಗ್ಗೆ 6 ಗಂಟೆಗೆ ಪಿಂಕ್ ಲೈನ್ ಮೆಟ್ರೋ ಸೇವೆ ಸುಗಮವಾಗಿ ಆರಂಭವಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಮಾರ್ಗಕ್ಕಾಗಿ ಕಾಯುತ್ತಿದ್ದ ಬನ್ನೇರುಘಟ್ಟ ರಸ್ತೆ ಭಾಗದ ಜನರ ಮುಖದಲ್ಲಿ ಇಂದು ಸಂತಸ ಕಾಣುತ್ತಿದೆ. ಪ್ರಯಾಣಿಕರ ಖುಷಿಯೇ ಸರ್ಕಾರಕ್ಕೆ ನಿಜವಾದ ಸಾರ್ಥಕತೆ” ಎಂದು ಹರ್ಷ ವ್ಯಕ್ತಪಡಿಸಿದರು.

ಟ್ರಾಫಿಕ್ ದಟ್ಟಣೆಗೆ ಮುಕ್ತಿ:

ಈ ಹೊಸ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ-ಬಿ (ಬನ್ನೇರುಘಟ್ಟ ರಸ್ತೆ), ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ (ಇಂಟರ್‌ಚೇಂಜ್) ಹಾಗೂ ಎಸ್.ಜಿ. ಪಾಳ್ಯ ಸೇರಿದಂತೆ ಒಟ್ಟು 6 ನಿಲ್ದಾಣಗಳಿವೆ. ರಸ್ತೆಯಲ್ಲಿ 20 ರಿಂದ 30 ನಿಮಿಷ ಹಿಡಿಯುತ್ತಿದ್ದ ಈ ಪ್ರಯಾಣವನ್ನು ಮೆಟ್ರೋ ಮೂಲಕ ಕೇವಲ 9 ರಿಂದ 10 ನಿಮಿಷಗಳಲ್ಲಿ ಕ್ರಮಿಸಬಹುದಾಗಿದ್ದು, ಟೆಕ್ ಉದ್ಯೋಗಿಗಳು ಮತ್ತು ದೈನಂದಿನ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಟ್ರಾಫಿಕ್ ಮುಕ್ತಿ ಸಿಕ್ಕಂತಾಗಿದೆ.

ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿರುವ ಪಿಂಕ್ ಲೈನ್ ರೈಲು ವೇಳಾಪಟ್ಟಿ:
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಕಾಳೇನ ಅಗ್ರಹಾರ ಮತ್ತು ಎಸ್.ಜಿ. ಪಾಳ್ಯ ನಡುವಿನ ನೂತನ ಮಾರ್ಗದ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ವಿವರ ಈ ಕೆಳಗಿನಂತಿದೆ:
  • ಮೊದಲ ರೈಲು (ಸೋಮವಾರ): ಕಾಳೇನ ಅಗ್ರಹಾರದಿಂದ ಬೆಳಿಗ್ಗೆ 4:55ಕ್ಕೆ ಹಾಗೂ ಎಸ್.ಜಿ. ಪಾಳ್ಯ ನಿಲ್ದಾಣದಿಂದ ಬೆಳಿಗ್ಗೆ 5:00 ಗಂಟೆಗೆ ಸೇವೆ ಆರಂಭವಾಗಲಿದೆ.
  • ಮಂಗಳವಾರದಿಂದ ಶನಿವಾರದವರೆಗೆ: ಈ ಎರಡೂ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗೆ 6:00 ಗಂಟೆಗೆ ಮೊದಲ ರೈಲು ಹೊರಡಲಿದೆ.
  • ಭಾನುವಾರದ ಸೇವೆ: ಭಾನುವಾರದಂದು ಬೆಳಿಗ್ಗೆ 7:00 ಗಂಟೆಯಿಂದ ರೈಲು ಸಂಚಾರ ಆರಂಭವಾಗಲಿದೆ.
  • ಕೊನೆಯ ರೈಲು: ಪ್ರತಿದಿನ ರಾತ್ರಿ 10:50ಕ್ಕೆ ಕಾಳೇನ ಅಗ್ರಹಾರದಿಂದ ಹಾಗೂ ರಾತ್ರಿ 10:54ಕ್ಕೆ ಎಸ್.ಜಿ. ಪಾಳ್ಯ ನಿಲ್ದಾಣದಿಂದ ಕೊನೆಯ ರೈಲು ಹೊರಡಲಿದೆ.
ರೈಲುಗಳ ಸಂಚಾರದ ಅಂತರ (Frequency):
ವಾರದ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆಯ ಅವಧಿಯಲ್ಲಿ ಪ್ರತಿ 8 ನಿಮಿಷಗಳಿಗೊಮ್ಮೆ ಹಾಗೂ ಇತರೆ ಸಾಮಾನ್ಯ ಅವಧಿಯಲ್ಲಿ ಪ್ರತಿ 10 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸಲಿವೆ. ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರದಂದು ದಿನಪೂರ್ತಿ ಪ್ರತಿ 10 ನಿಮಿಷಗಳಿಗೊಮ್ಮೆ ಮೆಟ್ರೋ ಸೇವೆ ಲಭ್ಯವಿರಲಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಆಧರಿಸಿ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ


Share this with Friends

Related Post