Sun. Nov 15th, 2026

ಬೇಲೂರಿನ ಕೋಗಿಲೆಮನೆ ಬಳಿ 50ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಮಡುಗಟ್ಟಿದ ಆತಂಕ

Share this with Friends

ಹಾಸನ (ಬೇಲೂರು): ಮಲೆನಾಡಿನ ಭಾಗದಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭಾನುವಾರ ಬೆಳಿಗ್ಗೆ ಬೇಲೂರು ತಾಲ್ಲೂಕಿನ ಕೋಗಿಲೆಮನೆ ಗ್ರಾಮದ ಸಮೀಪ ಬರೋಬ್ಬರಿ 50ಕ್ಕೂ ಹೆಚ್ಚು ಕಾಡಾನೆಗಳ ಬೃಹತ್ ಹಿಂಡು ಕಾಣಿಸಿಕೊಂಡಿದೆ. ಏಕಕಾಲಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಗಜಪಡೆ ಪ್ರತ್ಯಕ್ಷವಾಗಿರುವುದು ಸ್ಥಳೀಯ ಗ್ರಾಮಸ್ಥರು ಹಾಗೂ ಬೆಳೆಗಾರರಲ್ಲಿ ತೀವ್ರ ಭೀತಿ ಹುಟ್ಟಿಸಿದೆ.

ಮರಿ ಆನೆಗಳೊಂದಿಗೆ ದೊಡ್ಡ ಸಂಖ್ಯೆಯಲ್ಲಿ ಕಾಡಾನೆಗಳು ಗ್ರಾಮದ ಸುತ್ತಮುತ್ತಲಿನ ಕಾಫಿ ತೋಟಗಳು, ಜಮೀನುಗಳು ಹಾಗೂ ರಸ್ತೆ ಬದಿಯಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದೆ. ಶನಿವಾರ ಸಂಜೆಯಷ್ಟೇ ಬೇಲೂರು ತಾಲ್ಲೂಕಿನ ಚೌಡನಹಳ್ಳಿ ಬಳಿ ಕಾಡಾನೆ ದಾಳಿಗೆ ಜಯಮ್ಮ ಎಂಬ ಮಹಿಳೆ ಬಲಿಯಾದ ದುರ್ಘಟನೆ ನಡೆದಿತ್ತು. ಆ ಕರಾಳ ಘಟನೆಯ ಆಘಾತ ಮಾಸುವ ಮುನ್ನವೇ ಇಂದು ಬೆಳಿಗ್ಗೆ ಮತ್ತೆ ಬೃಹತ್ ಆನೆಗಳ ಹಿಂಡು ಕೋಗಿಲೆಮನೆ ಭಾಗದಲ್ಲಿ ಬೀಡುಬಿಟ್ಟಿರುವುದು ಈ ಭಾಗದ ಜನರ ನಿದ್ದೆಗೆಡಿಸಿದೆ.

ಕೂಲಿ ಕಾರ್ಮಿಕರು ಹಾಗೂ ಬೆಳೆಗಾರರ ಪರದಾಟ:

ಸದ್ಯ ಕಾಫಿ ಕೊಯ್ಲು ಹಾಗೂ ತೋಟದ ನಿರ್ವಹಣೆಯ ಕೆಲಸಗಳು ನಡೆಯುತ್ತಿರುವ ಸಮಯವಾಗಿದ್ದರೂ, ಕಾಡಾನೆಗಳ ಭಯದಿಂದಾಗಿ ಕೂಲಿ ಕಾರ್ಮಿಕರು ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳು ಶಾಲೆಗೆ ಹೋಗಲು ಮತ್ತು ಸಾರ್ವಜನಿಕರು ದೈನಂದಿನ ಕೆಲಸಗಳಿಗೆ ಓಡಾಡಲು ಭಯಪಡುವಂತಾಗಿದೆ. ಅಲ್ಲದೆ, ಅಪಾರ ಪ್ರಮಾಣದ ಕಾಫಿ, ಮೆಣಸು ಹಾಗೂ ಭತ್ತದ ಬೆಳೆ ನಾಶವಾಗುವ ಆತಂಕವೂ ರೈತರಿಗೆ ಎದುರಾಗಿದೆ.

ಅರಣ್ಯ ಇಲಾಖೆಗೆ ಗ್ರಾಮಸ್ಥರ ಆಗ್ರಹ:

ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಆನೆ ಕಾರ್ಯಪಡೆ (ETFs) ಸಿಬ್ಬಂದಿ ತಕ್ಷಣವೇ ಧಾವಿಸಿ, ಪಟಾಕಿ ಸಿಡಿಸುವ ಮೂಲಕ ಆನೆಗಳ ಹಿಂಡನ್ನು ಜನವಸತಿ ಪ್ರದೇಶದಿಂದ ಸುರಕ್ಷಿತವಾಗಿ ಕಾಡಿಗೆ ಅಟ್ಟಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೇವಲ ತಾತ್ಕಾಲಿಕ ಕಾರ್ಯಾಚರಣೆ ನಡೆಸದೆ, ಈ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ-ಮಾನವ ಸಂಘರ್ಷಕ್ಕೆ ಸರ್ಕಾರ ಮತ್ತು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

 


Share this with Friends

Related Post