Wed. Nov 18th, 2026

ಮಹಿಳೆಯರ ಋತುಬಂಧ ಆರೈಕೆಯ ‘ಋತು ತಾರೆ’ ಯೋಜನೆ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಜೊತೆ ನಟಿ ರಮ್ಯಾ ಸಮಾಲೋಚನೆ

Share this with Friends

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮಹಿಳಾ ಆರೋಗ್ಯ ಯೋಜನೆಯಾದ ‘ಋತು ತಾರೆ’ (Ruthu Taare) ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ ಮತ್ತು ವಿಸ್ತರಣೆ ಕುರಿತು ಯೋಜನೆಯ ರಾಯಭಾರಿಯಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಹತ್ವದ ಸಮಾಲೋಚನೆ ನಡೆಸಿದರು.

ನಗರದ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬುಧವಾರ ನಡೆದ ಈ ಸಭೆಯಲ್ಲಿ, ರಾಜ್ಯದ ಮಧ್ಯವಯಸ್ಕ ಮಹಿಳೆಯರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಳಜಿಯ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಪ್ರೊ. ನೇತ್ರಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಏನಿದು ‘ಋತು ತಾರೆ’ ಯೋಜನೆ?

ಮಹಿಳೆಯರ ಋತುಬಂಧ (ಮೆನೋಪಾಸ್) ಆರೈಕೆಗಾಗಿ ಪ್ರತ್ಯೇಕ ನೀತಿ ಹಾಗೂ ವಿಶೇಷ ಕಾರ್ಯಕ್ರಮವನ್ನು ರೂಪಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. 35 ವರ್ಷ ಮೇಲ್ಪಟ್ಟ ಮಹಿಳೆಯರು ಪೆರಿಮೆನೋಪಾಸ್ ಹಾಗೂ ಮೆನೋಪಾಸ್ ಹಂತದಲ್ಲಿ ಎದುರಿಸುವ ದೈಹಿಕ ಬದಲಾವಣೆಗಳು ಮತ್ತು ಮಾನಸಿಕ ಒತ್ತಡಗಳಿಗೆ ಸೂಕ್ತ ಚಿಕಿತ್ಸೆ, ಆಪ್ತ ಸಮಾಲೋಚನೆ ಹಾಗೂ ವೈಜ್ಞಾನಿಕ ಆರೈಕೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಯಭಾರಿಯಾಗಿ ನಟಿ ರಮ್ಯಾ ಅವರೊಂದಿಗೆ ಮುಖ್ಯಮಂತ್ರಿಗಳು ಮುಂದಿನ ರೂಪುರೇಷೆಗಳ ಕುರಿತು ಚರ್ಚೆ ನಡೆಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ:

ಭೇಟಿಯ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್  “ಕರ್ನಾಟಕದ ವಿನೂತನ ‘ಋತು ತಾರೆ’ ಯೋಜನೆಯ ರಾಯಭಾರಿಯಾಗಿ ಕೈಜೋಡಿಸಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರೊಂದಿಗೆ ಫಲಪ್ರದ ಸಭೆ ನಡೆಸಲಾಯಿತು. ಋತುಬಂಧದ (ಮೆನೋಪಾಸ್) ಸುತ್ತಲಿನ ಮೌನವನ್ನು ಮುರಿಯಲು ಮತ್ತು ಮಹಿಳೆಯರ ಆರೋಗ್ಯಕ್ಕೆ ಅಗತ್ಯವಿರುವ ಗಮನ, ಜಾಗೃತಿ ಹಾಗೂ ಸೂಕ್ತ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಮಹತ್ವದ ಹೆಜ್ಜೆ ಇಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ನಟಿ ರಮ್ಯಾ ಅಭಿಪ್ರಾಯ:

ಇದೇ ವೇಳೆ ನಟಿ ರಮ್ಯಾ  ಅವರು ಋತುಬಂಧದ ಆರೈಕೆಯ ಕುರಿತು ಹರ್ಷ ವ್ಯಕ್ತಪಡಿಸಿದ್ದು, “ರಾಜ್ಯ ಸರ್ಕಾರವು 35 ವರ್ಷ ಮೇಲ್ಪಟ್ಟ ಮಹಿಳೆಯರ ಆರೋಗ್ಯಕ್ಕಾಗಿ ‘ಋತು ತಾರೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಅಧಿಕೃತವಾಗಿ ಜಾರಿಗೊಳಿಸುತ್ತಿರುವುದು ಸ್ವಾಗತಾರ್ಹ. ಋತುಬಂಧದ ಕುರಿತಾದ ಹಿಂಜರಿಕೆಯನ್ನು ಹೋಗಲಾಡಿಸಿ, ಮಹಿಳೆಯರಿಗೆ ಸೂಕ್ತ ವೈದ್ಯಕೀಯ ನೆರವು ಮತ್ತು ಜಾಗೃತಿ ಮೂಡಿಸಲು ಈ ಯೋಜನೆ ಸಹಕಾರಿಯಾಗಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

 


Share this with Friends

Related Post