ಮೈಸೂರು: ರಾಜ್ಯ ಸರ್ಕಾರ ತನ್ನ ಆರ್ಥಿಕ ದಿವಾಳಿತನ ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಾ ಸುಪ್ರೀಂ ಕೋರ್ಟ್ಗೆ ಹೋಗುವ ಬೆದರಿಕೆ ಹಾಕುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದಿಂದ ಬಂದ ಅನುದಾನದ ಲೆಕ್ಕಾಚಾರ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳ ವಿಳಂಬದ ಕುರಿತು ಬಹಿರಂಗ ಚರ್ಚೆಗೆ ತಾವು ಸಿದ್ಧರಿರುವುದಾಗಿ ಸವಾಲು ಹಾಕಿದರು.
ಹಿಂದೆ ಸಿದ್ದರಾಮಯ್ಯನವರು ಕೇಂದ್ರದೊಂದಿಗೆ ಸಂಘರ್ಷಕ್ಕೆ ಇಳಿಯುತ್ತಿದ್ದರು; ಈಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಅದೇ ಹಾದಿ ಹಿಡಿದಿದ್ದಾರೆ. ಸಮನ್ವಯದಿಂದ ಕೆಲಸ ಮಾಡುವ ಬದಲು ಸಂಘರ್ಷಕ್ಕಿಳಿದು ರಾಜ್ಯದ ಅಭಿವೃದ್ಧಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಅಶೋಕ್ ಟೀಕಿಸಿದರು.
ಅಶೋಕ್ ಅವರ ಆರೋಪಗಳ ಪ್ರಮುಖ ಅಂಶಗಳು:
ಗ್ರಾಮ ಪಂಚಾಯಿತಿ ಅನುದಾನದಲ್ಲಿ 225 ಕೋಟಿ ವ್ಯತ್ಯಾಸ. 2024–25ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗಾಗಿ 2,133.25 ಕೋಟಿ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರ ವರ್ಗಾಯಿಸಿರುವುದು ಕೇವಲ 1,907 ಕೋಟಿ ಮಾತ್ರ. ಯುಪಿಎ ಸರ್ಕಾರದ ಅವಧಿಯಲ್ಲಿ ರೂಪಿಸಲಾದ ನಿಯಮದಂತೆ ಕೇಂದ್ರ ಹಣ ಬಿಡುಗಡೆ ಮಾಡಿದ 10 ದಿನಗಳಲ್ಲಿ ಪಂಚಾಯಿತಿಗಳಿಗೆ ವರ್ಗಾಯಿಸಬೇಕು. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸದೆ, ಉಳಿದ 225 ಕೋಟಿ ಹಣವನ್ನು ರಾಜ್ಯ ಸರ್ಕಾರ ತಡೆಹಿಡಿದಿರುವುದರಿಂದ ಗ್ರಾಮೀಣ ಭಾಗದ ಕುಡಿಯುವ ನೀರು, ಬೀದಿ ದೀಪ ಮತ್ತು ಸ್ವಚ್ಛತಾ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ ಎಂದು ದೂರಿದರು.
ರೈತರ ಪರಿಹಾರ ಮತ್ತು ಗೃಹಲಕ್ಷ್ಮಿ ಬಾಕಿ. ಬರಪೀಡಿತ ರೈತರಿಗೆ ಮೊದಲು 2,500, ನಂತರ 5,000 ಪರಿಹಾರ ನೀಡುವುದಾಗಿ ಘೋಷಿಸಿದ್ದ ಸರ್ಕಾರ, ಈಗ ಕಂಪ್ಯೂಟರ್ ತಾಂತ್ರಿಕ ದೋಷದ ನೆಪವೊಡ್ಡಿ ಕೇವಲ 1,000 ದಿಂದ 1,500 ಜಮೆ ಮಾಡುತ್ತಿದೆ. ಇತ್ತ ಗೃಹಲಕ್ಷ್ಮಿ ಯೋಜನೆಯಡಿ ಸುಮಾರು 5,000 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದ್ದು, ಸಾಲದ ಮಿತಿ ಮೀರಿರುವ ಬಗ್ಗೆ ಸ್ವತಃ ಹಣಕಾಸು ಇಲಾಖೆಯೇ ಎಚ್ಚರಿಕೆ ನೀಡಿದೆ ಎಂದರು.
ಪಿಂಚಣಿದಾರರು, ಆಶಾ ಮತ್ತು ಪೌರಕಾರ್ಮಿಕರಿಗೆ ಅನ್ಯಾಯ. ತಿಂಗಳುಗಳಿಂದ ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲರ ಪಿಂಚಣಿ ಬಿಡುಗಡೆಯಾಗದೆ ಅಂಗವಿಕಲರು ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವಂತಾಗಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ವಿಧಾನಸೌಧದ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕಸದ ಗುತ್ತಿಗೆದಾರರಿಗೆ 5 ತಿಂಗಳಿಂದ ಬಿಲ್ ಪಾವತಿಸದ ಕಾರಣ ಪೌರಕಾರ್ಮಿಕರಿಗೆ ಸಂಬಳವಿಲ್ಲದೆ ನಗರದಲ್ಲಿ ಕಸದ ರಾಶಿ ಬಿದ್ದಿದೆ ಎಂದು ಆರೋಪಿಸಿದರು.
ಆರೋಗ್ಯ ವ್ಯವಸ್ಥೆ ಮತ್ತು ನರೇಗಾ ನಿರ್ಲಕ್ಷ್ಯ. ಎಚ್.ಡಿ. ಕೋಟೆ ತಾಲೂಕಿನ ಆಸ್ಪತ್ರೆಯೊಂದು ಆರಂಭವಾಗಿ 3 ವರ್ಷ ಕಳೆದರೂ 12 ಸಿಬ್ಬಂದಿ ಬದಲು ಕೇವಲ ಒಬ್ಬ ವಾಚ್ಮನ್ ಮಾತ್ರ ಇದ್ದಾರೆ. ಉದ್ಯೋಗ ಖಾತರಿ ಯೋಜನೆಯಲ್ಲೂ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡದೆ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಿದೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ನಿಂದ ಅವಮಾನ:
ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು 5ನೇ ಸಾಲಿನಲ್ಲಿ ಕೂರಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್, “16 ಬಜೆಟ್ ಮಂಡಿಸಿರುವ, ಹಿಂದುಳಿದ ವರ್ಗದ ಪ್ರಭಾವಿ ನಾಯಕರಾದ ಸಿದ್ದರಾಮಯ್ಯ ಅವರನ್ನು ಹಿಂದಿನ ಸಾಲಿನಲ್ಲಿ ಕೂರಿಸಿರುವುದು ಇಡೀ ಕರ್ನಾಟಕದ ಜನತೆಗೆ ಮಾಡಿದ ಅವಮಾನ. ಪ್ರಧಾನಿ ಮೋದಿಯವರು ಬೆಂಗಳೂರು ಮೆಟ್ರೋ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಆತ್ಮೀಯವಾಗಿ ಕರೆದು ಗೌರವ ನೀಡಿದ್ದರು. ಆದರೆ ಕಾಂಗ್ರೆಸ್ ನಾಯಕತ್ವ ತನ್ನದೇ ನಾಯಕರನ್ನು ನಡೆಸಿಕೊಳ್ಳುವ ರೀತಿ ಪಕ್ಷದ ಆಂತರಿಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ” ಎಂದು ವ್ಯಂಗ್ಯವಾಡಿದರು.

