Wed. Nov 18th, 2026

ಬೆಂಗಳೂರು ನಗರ ಪೊಲೀಸ್ ಸಾರಥ್ಯಕ್ಕೆ ಆರ್. ಹಿತೇಂದ್ರ: ನಿರ್ಗಮಿತ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಂದ ಅಧಿಕಾರ ಹಸ್ತಾಂತರ

Share this with Friends

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ನಾಯಕತ್ವದ ಹೊಸ ಅಧ್ಯಾಯ ಆರಂಭವಾಗಿದ್ದು, ನೂತನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ADGP) ಹಾಗೂ ನಗರದ ಮೊದಲ ಮುಖ್ಯ ಪೊಲೀಸ್ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಆರ್. ಹಿತೇಂದ್ರ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.

ಈವರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಸೀಮಂತ್ ಕುಮಾರ್ ಸಿಂಗ್ ಅವರು, ಸಂಪ್ರದಾಯಬದ್ಧವಾಗಿ ದಂಡ (ಬ್ಯಾಟನ್) ಹಸ್ತಾಂತರಿಸುವ ಮೂಲಕ ನೂತನ ಮುಖ್ಯ ಆಯುಕ್ತರಿಗೆ ಅಧಿಕಾರ ವಹಿಸಿಕೊಟ್ಟರು. ಸೀಮಂತ್ ಕುಮಾರ್ ಸಿಂಗ್ ಅವರನ್ನು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಆರ್. ಹಿತೇಂದ್ರ ಅವರ ಮೊದಲ ಹೇಳಿಕೆ:

ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಮುಖ್ಯ ಪೊಲೀಸ್ ಆಯುಕ್ತ ಆರ್. ಹಿತೇಂದ್ರ, “ನನ್ನನ್ನು ಬೆಂಗಳೂರು ನಗರದ ಮುಖ್ಯ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. 1963ಕ್ಕೆ ಹೋಲಿಸಿದರೆ ಇಂದು ಬೆಂಗಳೂರಿನ ಜನಸಂಖ್ಯೆ ಮತ್ತು ನಗರದ ಸವಾಲುಗಳು ಸಾಕಷ್ಟು ಹೆಚ್ಚಾಗಿವೆ. ನಗರದ ವಿವಿಧ ಸಮಸ್ಯೆಗಳು, ಅಪರಾಧ ಪ್ರಕರಣಗಳು ಮತ್ತು ಸಂಚಾರ ದಟ್ಟಣೆಯನ್ನು ಸುದೀರ್ಘವಾಗಿ ಅಧ್ಯಯನ ಮಾಡಿಯೇ ಸರ್ಕಾರವು ಬೆಂಗಳೂರನ್ನು ಐದು ಪೊಲೀಸ್ ಕಮಿಷನರೇಟ್‌ಗಳಾಗಿ ವಿಭಜಿಸಿದೆ. ಈ ಐದು ಕಮಿಷನರೇಟ್‌ಗಳ ನೂತನ ವ್ಯವಸ್ಥೆಯನ್ನು ಜನರಿಗೆ ಕಣ್ಣಿಗೆ ಕಾಣುವ ರೀತಿಯಲ್ಲಿ (Visible Policing) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ” ಎಂದು ತಿಳಿಸಿದರು.

ಅಲ್ಲದೆ, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ರೌಡಿಸಂಗೆ ಕಡಿವಾಣ ಹಾಕುವುದು ಹಾಗೂ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಸಮನ್ವಯದಿಂದ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು.

5 ಕಮಿಷನರೇಟ್‌ಗಳ ನೂತನ ವ್ಯವಸ್ಥೆ:

ಬೆಂಗಳೂರು ನಗರ ಪೊಲೀಸ್ ಆಡಳಿತವನ್ನು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಎಂಬ ಐದು ಪ್ರತ್ಯೇಕ ಕಮಿಷನರೇಟ್‌ಗಳಾಗಿ ರಾಜ್ಯ ಸರ್ಕಾರ ಪುನರ್‌ರಚಿಸಿದೆ. ಈ ಐದೂ ವಿಭಾಗಗಳ ಆಯುಕ್ತರ ಮೇಲ್ವಿಚಾರಣೆ ನಡೆಸುವ ನೂತನ ‘ಮುಖ್ಯ ಪೊಲೀಸ್ ಆಯುಕ್ತ’ ಹುದ್ದೆಯನ್ನು ಅಲಂಕರಿಸಿದ 1996ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಆರ್. ಹಿತೇಂದ್ರ ಅವರು ನಗರದ 40ನೇ ಪೊಲೀಸ್ ಮುಖ್ಯಸ್ಥರಾಗಿದ್ದಾರೆ.

“ನಾಯಕತ್ವ ಬದಲಾಗುತ್ತದೆ, ಆದರೆ ಬೆಂಗಳೂರು ನಗರದ ರಕ್ಷಣೆಗಾಗಿ ನಮ್ಮ ಬದ್ಧತೆ ಎಂದೆಂದಿಗೂ ಅಚಲವಾಗಿರುತ್ತದೆ” ಎಂದು ಬೆಂಗಳೂರು ನಗರ ಪೊಲೀಸ್ ಇಲಾಖೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

 

 


Share this with Friends

Related Post