ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ (PG Medical) ಕೋರ್ಸ್ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಮುಂಗಡ ಹಣ (Caution Deposit) ಪಾವತಿಸಲು ನವೆಂಬರ್ 21ರವರೆಗೆ ಅವಕಾಶ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಅಭ್ಯರ್ಥಿಗಳು ನವೆಂಬರ್ 23ರ ಬೆಳಿಗ್ಗೆ 11 ಗಂಟೆಯವರೆಗೆ ತಮ್ಮ ಇಚ್ಛೆಯ ಆಯ್ಕೆಗಳನ್ನು (Options) ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಸೀಟು ಹಂಚಿಕೆ ಫಲಿತಾಂಶ ಮತ್ತು ಮುಂದಿನ ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಕ್ರೈಸ್ (KREIS) ವಸತಿ ಶಾಲೆ ನೇಮಕಾತಿ ಪರೀಕ್ಷೆ ಕುರಿತು ಮಹತ್ವದ ಸ್ಪಷ್ಟನೆ:
ಇದೇ ವೇಳೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಶಾಲೆಗಳಲ್ಲಿನ ಉಳಿಕೆ ಮೂಲ ವೃಂದದ (RPC) ಹುದ್ದೆಗಳ ನೇಮಕಾತಿಗೆ ನವೆಂಬರ್ 22ರಂದು ನಡೆಯಲಿರುವ ಲಿಖಿತ ಪರೀಕ್ಷೆಯ ಕುರಿತು ಕೆಇಎ ಸ್ಪಷ್ಟನೆ ನೀಡಿದೆ.
ಬೆಳಗಿನ ಅವಧಿ: ನ.22ರ ಬೆಳಿಗ್ಗೆ ಎಲ್ಲಾ ವಿಷಯಗಳ ಅಭ್ಯರ್ಥಿಗಳಿಗೆ ಸಾಮಾನ್ಯ ಜ್ಞಾನ (General Knowledge) ಪತ್ರಿಕೆಯ ಪರೀಕ್ಷೆ ನಡೆಯಲಿದೆ.
ಮಧ್ಯಾಹ್ನದ ಅವಧಿ: ಮಧ್ಯಾಹ್ನ ಕೇವಲ ಕನ್ನಡ ಮತ್ತು ವಿಜ್ಞಾನ ವಿಷಯಗಳ ನಿರ್ದಿಷ್ಟ ಪತ್ರಿಕೆ-2ಕ್ಕೆ (Specific Paper-2) ಮಾತ್ರ ಪರೀಕ್ಷೆ ಇರಲಿದೆ.
ಅಭ್ಯರ್ಥಿಗಳು ಪ್ರವೇಶ ಪತ್ರವನ್ನು (Hall Ticket) ಡೌನ್ಲೋಡ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಉಳಿದ ವಿಷಯಗಳ ನಿರ್ದಿಷ್ಟ ಪತ್ರಿಕೆಗಳ ಪರೀಕ್ಷಾ ವೇಳಾಪಟ್ಟಿ ಬೇರೆಯೇ ಇದ್ದು, ಮುಂದಿನ ದಿನಗಳಲ್ಲಿ ಅವುಗಳ ಪ್ರವೇಶ ಪತ್ರವನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುವುದು. ಈ ಕುರಿತು ಅಭ್ಯರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಎಚ್. ಪ್ರಸನ್ನ ಕೋರಿದ್ದಾರೆ.

