ಬೆಂಗಳೂರು: ಸಾಂಸ್ಕೃತಿಕ ನಾಯಕ ಬಸವಣ್ಣನವರಿಗೆ ಅಪಮಾನ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ‘ಬಸವ ಮಂಟಪ’ ಪುಸ್ತಕದ ಪ್ರತಿಗಳನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಅಲ್ಲದೆ, ಈ ಕೃತಿಯ ಹಿಂದಿರುವವರು ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ರೀತ್ಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರಿಗೆ ಅಪಮಾನ ಎಸಗಿರುವುದು ಇಡೀ ಕರ್ನಾಟಕಕ್ಕೆ ಮಾಡಿದ ದೊಡ್ಡ ಅಗೌರವ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಸವಣ್ಣನವರ ತತ್ವಾದರ್ಶಗಳು ಇಡೀ ದೇಶಕ್ಕೆ ಮಾದರಿಯಾಗಿದ್ದು, ನಮ್ಮ ಸರ್ಕಾರ ಅವರ ವಿಚಾರಧಾರೆಗಳ ಅಡಿಯಲ್ಲೇ ಮುನ್ನಡೆಯುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಅಳವಡಿಸುವುದರ ಜೊತೆಗೆ ದೆಹಲಿಯಲ್ಲೂ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸಲಾಗಿದೆ. ಶಾಲೆ, ಮನೆ ಹಾಗೂ ಪ್ರತಿ ಹಳ್ಳಿಗೂ ಅವರ ಸಂದೇಶ ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದರು.
ಶಾಂತಿ ಕದಡುವ ಪ್ರಯತ್ನಕ್ಕೆ ಕಡಿವಾಣ:
ಕೆಲವು ಕಿಡಿಗೇಡಿಗಳು ಹಾಗೂ ಮಾಧ್ಯಮಗಳು ಜಾತಿ ವಿಚಾರವನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಅಶಾಂತಿ ಮತ್ತು ವೈಷಮ್ಯ ಬಿತ್ತುವ ಕೆಲಸ ಮಾಡುತ್ತಿವೆ. ಈ ಕುರಿತು ಬಸವ ಸಮಿತಿಯವರೂ ಪತ್ರ ಬರೆದಿದ್ದು, ಸಚಿವರಾದ ಈಶ್ವರ್ ಖಂಡ್ರೆ, ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಬಸವರಾಜ ರಾಯರೆಡ್ಡಿ, ಕೆ.ಎಚ್. ಮುನಿಯಪ್ಪ, ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಇಡೀ ಸಂಪುಟ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲಿ ಪ್ರತಿಭಟನೆಗಳು ಭುಗಿಲೆದ್ದು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಪುಸ್ತಕ ಮುಟ್ಟುಗೋಲಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಮತ್ತಷ್ಟು ಸುದೀರ್ಘ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ನಮ್ಮಲ್ಲೇ ಕುಡಿಯುವ ನೀರಿಗೆ ಹಾಹಾಕಾರವಿದೆ:
ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, “ನಮ್ಮಲ್ಲಿ ಹೆಚ್ಚುವರಿ ನೀರಿದ್ದರೆ ತಮಿಳುನಾಡಿಗೆ ಹರಿಸಲು ಯಾವುದೇ ಅಭ್ಯಂತರವಿಲ್ಲ. ಆದರೆ, ಪ್ರಸ್ತುತ ರಾಜ್ಯದ ಜನತೆಗೇ ಕುಡಿಯಲು ನೀರಿಲ್ಲದಂತಹ ಸಂಕಷ್ಟದ ಸ್ಥಿತಿ ಎದುರಾಗಿದೆ. ಈ ವರ್ಷ ಕಾವೇರಿಗೆ ಬಾಗಿನ ಅರ್ಪಿಸಲೂ ಸಾಧ್ಯವಾಗದಷ್ಟು ನೀರಿನ ಕೊರತೆ ಇದೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ರಾಜ್ಯದ ವಾಸ್ತವಿಕ ನೀರಿನ ಮಟ್ಟ ಇಡೀ ಜಗತ್ತಿಗೆ ತಿಳಿದಿದೆ. ನಮ್ಮ ರೈತರ ಹಿತಾಸಕ್ತಿ ಕಾಯುವುದು ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಅಂಶಗಳನ್ನು ಪಕ್ಷದ ವರಿಷ್ಠರ ಗಮನಕ್ಕೂ ತರಲಾಗುತ್ತಿದೆ ಎಂದರು.
ಎಲ್ಲಾ ಶಾಸಕರಿಗೂ ಆಹ್ವಾನ ನೀಡಿದ್ದೆ:
ಹಿರಿಯೂರು ಉಪಚುನಾವಣೆ ಕುರಿತು ಸಚಿವರೊಂದಿಗೆ ಚರ್ಚೆ ನಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಸಭೆಯಲ್ಲಿ ಎಲ್ಲಾ ರಾಜಕೀಯ ವಿಚಾರಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ. ನಾನು ನನ್ನ ಹೊಸ ನಿವಾಸ ‘ಗಂಗಾ’ಕ್ಕೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಭೋಜನಕೂಟ ಏರ್ಪಡಿಸಿದ್ದೆ. ನಾನು ರಾಜ್ಯದ 224 ಕ್ಷೇತ್ರಗಳ ಶಾಸಕರಿಗೂ ಮುಖ್ಯಮಂತ್ರಿಯಾಗಿದ್ದು, ಪಕ್ಷಭೇದ ಮರೆತು ಎಲ್ಲಾ ಶಾಸಕರಿಗೂ ಆಹ್ವಾನ ನೀಡಿದ್ದೆ” ಎಂದು ಸ್ಪಷ್ಟನೆ ನೀಡಿದರು.

