Mon. Nov 23rd, 2026

ಕೇಂದ್ರ ಬರ ಪರಿಹಾರ ಬಿಡುಗಡೆ ಮಾಡದಿದ್ದರೆ ಮುಂದಿನ ಕ್ರಮದ ಬಗ್ಗೆ ಚಿಂತನೆ: ಡಾ. ಜಿ. ಪರಮೇಶ್ವರ್

Share this with Friends

ಬೆಂಗಳೂರು: ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸಲು ₹22 ಸಾವಿರ ಕೋಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮೂರು ಬಾರಿ ಮನವಿ ಸಲ್ಲಿಸಲಾಗಿದೆ. ಕೇಂದ್ರದ ಅಧ್ಯಯನ ತಂಡಗಳು ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿದ್ದರೂ, ಕಳೆದ ಎರಡು ತಿಂಗಳಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.

ಸದಾಶಿವನಗರದ ತಮ್ಮ ಗೃಹಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸ್ಪಂದನೆಗಾಗಿ ಇನ್ನೂ ಸ್ವಲ್ಪ ದಿನ ಕಾಯುತ್ತೇವೆ. ಒಂದು ವೇಳೆ ಪರಿಹಾರ ಬಿಡುಗಡೆಯಾಗದಿದ್ದರೆ, ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಸಮಾಲೋಚಿಸಿ ಮುಂದಿನ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬರದ ವಿಚಾರದಲ್ಲಿ ರಾಜಕೀಯ ಬೇಡ:

“ಬರ ಯಾರನ್ನೂ ಕೇಳಿ ಬರುವುದಿಲ್ಲ. ರೈತರು ಸಂಕಷ್ಟದಲ್ಲಿರುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕೇ ಹೊರತು ಪರಸ್ಪರ ಆರೋಪ ಮಾಡುತ್ತಾ ರಾಜಕೀಯ ಮಾಡಬಾರದು. ರಾಜಕೀಯ ಮಾಡಲು ಬೇರೆ ಸಾಕಷ್ಟು ವಿಷಯಗಳಿವೆ. ಪ್ರಧಾನಿ, ಗೃಹ ಸಚಿವರು ಹಾಗೂ ಕೃಷಿ ಸಚಿವರಿಗೆ ಪತ್ರ ಬರೆದು ಭೇಟಿಗೆ ಸಮಯ ಕೋರಿದ್ದೇವೆ. ಜವಾಬ್ದಾರಿಯುತ ರಾಜ್ಯ ಸರ್ಕಾರವೊಂದರ ಮನವಿಗೆ ಸ್ಪಂದಿಸುವ ಕರ್ತವ್ಯ ಕೇಂದ್ರಕ್ಕಿದೆ” ಎಂದು ಹೇಳಿದರು. ಈ ಹಿಂದೆಯೂ ಸುಪ್ರೀಂ ಕೋರ್ಟ್ ಮೊರೆ ಹೋದ ಬಳಿಕವೇ ₹3,500 ಕೋಟಿ ಪರಿಹಾರ ಸಿಕ್ಕಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಬಾರದೆ ಕೇಂದ್ರವೇ ಸ್ಪಂದಿಸಲಿದೆ ಎಂಬ ವಿಶ್ವಾಸವಿದೆ ಎಂದರು. ಅಲ್ಲದೆ, ರಾಜ್ಯ ಸರ್ಕಾರ ಘೋಷಿಸಿರುವ ತಲಾ ₹5 ಸಾವಿರ ಪರಿಹಾರವನ್ನು ಅಧಿವೇಶನಕ್ಕೂ ಮುನ್ನವೇ ಎಲ್ಲ ಜಿಲ್ಲೆಗಳ ಅರ್ಹ ರೈತರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಆಶಾ ಕಾರ್ಯಕರ್ತೆಯರು ಸಿಎಂ ಮೇಲೆ ವಿಶ್ವಾಸವಿಡಲಿ:

ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, “ಮುಖ್ಯಮಂತ್ರಿಗಳೇ ಖುದ್ದಾಗಿ ಪ್ರತಿಭಟನಾಕಾರರ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ನವೆಂಬರ್ 25ರ ಸಂಜೆ ಸಿಎಂ ಮತ್ತೊಮ್ಮೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳ ಮಾತಿನ ಮೇಲೆ ವಿಶ್ವಾಸವಿಟ್ಟು ಪ್ರತಿಭಟನಾಕಾರರು ತಾಳ್ಮೆಯಿಂದಿರಬೇಕು. ಲಿಖಿತ ಭರವಸೆಗಿಂತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ” ಎಂದರು.

ಪುಸ್ತಕ ಮುಟ್ಟುಗೋಲು ವಿಚಾರ: ಕಾನೂನು ನೆನಪಿಸಬೇಕಾಗುತ್ತದೆ

ರವಿ ಹಂಜ್ ಅವರ ಪುಸ್ತಕ ಮುಟ್ಟುಗೋಲು ಮತ್ತು ಅವರು ಸರ್ಕಾರಕ್ಕೆ ಹಾಕಿರುವ ಸವಾಲಿನ ಬಗ್ಗೆ ಮಾತನಾಡಿದ ಡಿಸಿಎಂ, “ಪುಸ್ತಕದಲ್ಲಿರುವ ಅಂಶಗಳಿಗೆ ರಾಜ್ಯದ ಹಲವು ಸಮುದಾಯಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಕೂಲಂಕಷವಾಗಿ ಪರಿಶೀಲಿಸಿದ ಬಳಿಕವೇ ಪುಸ್ತಕ ಮುಟ್ಟುಗೋಲು ಹಾಕುವ ನಿರ್ಧಾರ ಕೈಗೊಳ್ಳಲಾಗಿದೆ. ಅವರು ಹಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವುದರಿಂದ ಈ ದೇಶದ ಕಾನೂನುಗಳನ್ನು ಮರೆತಿರಬಹುದು. ಸರ್ಕಾರಕ್ಕೆ ಸವಾಲು ಹಾಕುವುದಾದರೆ ಅವರಿಗೆ ಇಲ್ಲಿನ ಕಾನೂನನ್ನು ಮತ್ತೊಮ್ಮೆ ನೆನಪಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು

 


Share this with Friends

Related Post