Mon. Nov 23rd, 2026

ಜಪಾನ್‌ನ ಟೊಯೋಟಾ ಘಟಕಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ: ರಾಜ್ಯದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಸಂಪೂರ್ಣ ಬೆಂಬಲದ ಭರವಸೆ

Share this with Friends

ಬೆಂಗಳೂರು/ಟೋಕಿಯೊ: ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಮೊಟೊಮಾಚಿಯಲ್ಲಿರುವ ಟೊಯೋಟಾ ಮೋಟಾರ್ ಕಾರ್ಪೊರೇಷನ್ ಘಟಕಕ್ಕೆ ಭೇಟಿ ನೀಡಿ, ಸಂಸ್ಥೆಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಸಕಾಜು ಯೋಶಿಮುರಾ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದರು.

ಟೊಯೋಟಾ ಕಂಪನಿಯು ತನ್ನ ವಾಹನ ಉತ್ಪಾದನಾ ಸಾಮರ್ಥ್ಯವನ್ನು 10 ಲಕ್ಷಕ್ಕೆ (ಒಂದು ಮಿಲಿಯನ್) ವಿಸ್ತರಿಸುವ ಗುರಿ ಹೊಂದಿದ್ದು, ರಾಜ್ಯದಲ್ಲಿ ಸಂಸ್ಥೆಯ ಈ ವಿಸ್ತರಣಾ ಯೋಜನೆಗಳಿಗೆ ಕರ್ನಾಟಕ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಹೈಬ್ರಿಡ್ ಟ್ಯಾಕ್ಸಿ ಮತ್ತು ಫ್ಲೆಕ್ಸ್-ಫ್ಯೂಯಲ್ ಬಗ್ಗೆ ಚರ್ಚೆ:

ರಾಜ್ಯದಲ್ಲಿ ಪರಿಸರ ಸ್ನೇಹಿ ಸಾರಿಗೆಗೆ ಒತ್ತು ನೀಡುವ ನಿಟ್ಟಿನಲ್ಲಿ, ಟೊಯೋಟಾದ ಕೈಗೆಟುಕುವ ದರದ ಹೈಬ್ರಿಡ್ ಎಲೆಕ್ಟ್ರಿಕ್ ಟ್ಯಾಕ್ಸಿ ಮಾದರಿಯನ್ನು ಕರ್ನಾಟಕದಲ್ಲಿ ಪರಿಚಯಿಸುವಂತೆ ಸಿಎಂ ಸಲಹೆ ನೀಡಿದರು. ಜೊತೆಗೆ, ಫ್ಲೆಕ್ಸ್-ಫ್ಯೂಯಲ್ (ಪರ್ಯಾಯ ಇಂಧನ) ವಾಹನಗಳ ತಯಾರಿಕೆ ಮತ್ತು ಹೂಡಿಕೆಯ ಅವಕಾಶಗಳ ಕುರಿತೂ ಉನ್ನತ ಮಟ್ಟದ ಚರ್ಚೆ ನಡೆಸಲಾಯಿತು.

ಕನ್ನಡಿಗ ಐಟಿಐ ಪದವೀಧರರೊಂದಿಗೆ ಸಂವಾದ:

ನಿಯೋಗವು ಮೊಟೊಮಾಚಿ ಉತ್ಪಾದನಾ ಘಟಕ ಹಾಗೂ ಟೊಯೋಟಾ ಕೈಕನ್ ಮ್ಯೂಸಿಯಂಗೆ ಭೇಟಿ ನೀಡಿ ಅತ್ಯಾಧುನಿಕ ತಂತ್ರಜ್ಞಾನ, ಸುಧಾರಿತ ಉತ್ಪಾದನಾ ವ್ಯವಸ್ಥೆ ಮತ್ತು ಭವಿಷ್ಯದ ಮೊಬಿಲಿಟಿ ಪರಿಕಲ್ಪನೆಗಳನ್ನು ವೀಕ್ಷಿಸಿತು. ಇದೇ ಸಂದರ್ಭದಲ್ಲಿ, ಟೊಯೋಟಾದ ‘ಗ್ಲೋಬಲ್ ಸ್ಕಿಲ್-ಅಪ್’ ಯೋಜನೆಯಡಿ ಜಪಾನ್‌ನಲ್ಲಿ ವಿಶೇಷ ತರಬೇತಿ ಪಡೆಯುತ್ತಿರುವ ಕರ್ನಾಟಕದ 20ಕ್ಕೂ ಹೆಚ್ಚು ಐಟಿಐ ಪದವೀಧರರೊಂದಿಗೆ ಸಿಎಂ ಸಂವಾದ ನಡೆಸಿ ಹುರಿದುಂಬಿಸಿದರು.

ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನ:

ಮುಂಬರುವ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (Global Investors Meet) ಪಾಲ್ಗೊಳ್ಳುವಂತೆ ಟೊಯೋಟಾ ನಾಯಕತ್ವಕ್ಕೆ ಮುಖ್ಯಮಂತ್ರಿಗಳು ಅಧಿಕೃತ ಆಹ್ವಾನ ನೀಡಿದರು. ರಾಜ್ಯದ ಕೈಗಾರಿಕಾ ವಲಯವನ್ನು ಮತ್ತಷ್ಟು ಬಲಪಡಿಸಲು, ಜಾಗತಿಕ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಸ್ಥಳೀಯ ಯುವಕರಿಗೆ ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

 

 


Share this with Friends

Related Post