Mon. Nov 23rd, 2026

ಶಿವಮೊಗ್ಗ ವಿಮಾನಯಾನ ಕ್ಷೇತ್ರಕ್ಕೆ ಸಿಹಿಸುದ್ದಿ: ಕೇಂದ್ರದ ‘ಉಡಾನ್ 6.0’ ಯೋಜನೆಯಡಿ ನಿಲ್ದಾಣ ಸೇರ್ಪಡೆ

Share this with Friends

ಶಿವಮೊಗ್ಗ: ಮಲೆನಾಡಿನ ವಿಮಾನಯಾನ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಭರ್ಜರಿ ಕೊಡುಗೆ ಸಿಕ್ಕಿದ್ದು, ‘ಉಡಾನ್ 6.0’ (UDAN 6.0) ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸೇರ್ಪಡೆಗೊಳಿಸಲಾಗಿದೆ. ಇದರಿಂದ ಶೀಘ್ರದಲ್ಲೇ ಶಿವಮೊಗ್ಗದಿಂದ ವಿಮಾನ ಸೇವೆಗಳು ಪುನಾರಂಭಗೊಳ್ಳಲಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಮಾಹಿತಿ ನೀಡಿದ್ದಾರೆ.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿಶೇಷ ಪ್ರಯತ್ನದ ಫಲವಾಗಿ ಶಿವಮೊಗ್ಗ ನಿಲ್ದಾಣಕ್ಕೆ ಈ ಅವಕಾಶ ಲಭಿಸಿದೆ. ಈ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ವಿಮಾನಯಾನ ಸಂಸ್ಥೆಗಳು ಪಾಲ್ಗೊಳ್ಳಲು ಡಿಸೆಂಬರ್ 31ರವರೆಗೆ ಅವಕಾಶ ನೀಡಲಾಗಿದೆ ಎಂದರು.

ಮಾರ್ಗಗಳ ನಿರ್ಬಂಧವಿಲ್ಲ, ಕೇಂದ್ರದಿಂದಲೇ ಸಬ್ಸಿಡಿ:

ಈ ಬಾರಿಯ ಉಡಾನ್ ಯೋಜನೆಯಲ್ಲಿ ಕೇವಲ ನಿರ್ದಿಷ್ಟ ನಗರಗಳಿಗೆ ಮಾತ್ರ ವಿಮಾನ ಹಾರಾಟ ನಡೆಸಬೇಕೆಂಬ ಯಾವುದೇ ನಿರ್ಬಂಧಗಳಿಲ್ಲ. ಏರ್‌ಲೈನ್ಸ್ ಕಂಪನಿಗಳು ತಮ್ಮ ಆದ್ಯತೆಯ ಯಾವುದೇ ಮಾರ್ಗಗಳಲ್ಲಿ ಶಿವಮೊಗ್ಗದಿಂದ ಸೇವೆ ಆರಂಭಿಸಬಹುದಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರದಿಂದಲೇ ಸಬ್ಸಿಡಿ ದೊರೆಯಲಿದೆ. ಈಗಾಗಲೇ ಮೂರು ಪ್ರಮುಖ ವಿಮಾನಯಾನ ಸಂಸ್ಥೆಗಳೊಂದಿಗೆ ಈ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎಂದು ಸಂಸದರು ತಿಳಿಸಿದರು.

ಮುಂದಿನ 5 ವರ್ಷ ಅಡೆತಡೆಯಿಲ್ಲದ ಸೇವೆ:

ಈ ಹಿಂದಿನ ಉಡಾನ್ ಒಪ್ಪಂದ ಮುಕ್ತಾಯಗೊಂಡ ಬಳಿಕ ವಿಧಿಸಲಾಗಿದ್ದ ‘ಕಮರ್ಷಿಯಲ್ ಬ್ರೇಕ್’ (ವಾಣಿಜ್ಯ ವಿರಾಮ) ನಿಯಮವನ್ನು ಈ ಬಾರಿ ಕೈಬಿಡಲಾಗಿದೆ. ಹೀಗಾಗಿ ಹೊಸ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡ ನಂತರ, ಮುಂದಿನ ಐದು ವರ್ಷಗಳ ಕಾಲ ಶಿವಮೊಗ್ಗದಿಂದ ವಿಮಾನ ಸೇವೆ ಯಾವುದೇ ಅಡಚಣೆಯಿಲ್ಲದೆ ನಿರಂತರವಾಗಿ ಸಾಗಲಿದೆ ಎಂದು ಭರವಸೆ ನೀಡಿದರು.

ತಾತ್ಕಾಲಿಕ ಸೇವೆಗೆ ರಾಜ್ಯ ಸರ್ಕಾರದ ನೆರವು ಕೋರಿಕೆ:

ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಪೂರ್ಣ ಪ್ರಮಾಣದ ವಿಮಾನ ಹಾರಾಟ ಶುರುವಾಗಲು ಫೆಬ್ರವರಿ ಅಥವಾ ಮಾರ್ಚ್ ತಿಂಗಳವರೆಗೆ ಕಾಲಾವಕಾಶ ಬೇಕಾಗುತ್ತದೆ. ಅಲ್ಲಿಯವರೆಗಿನ ಮೂರ್ನಾಲ್ಕು ತಿಂಗಳ ಅವಧಿಗೆ ಶಿವಮೊಗ್ಗ–ಬೆಂಗಳೂರು ಹಾಗೂ ಶಿವಮೊಗ್ಗ–ಹೈದರಾಬಾದ್ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ವಿಮಾನ ಸೇವೆ ಒದಗಿಸಲು ರಾಜ್ಯ ಸರ್ಕಾರವು ‘ವಯಬಿಲಿಟಿ ಗ್ಯಾಪ್ ಫಂಡ್’ (VGF) ಅಡಿಯಲ್ಲಿ ಆರ್ಥಿಕ ಸಹಕಾರ ನೀಡಬೇಕು ಎಂದು ಬಿ.ವೈ. ರಾಘವೇಂದ್ರ ಒತ್ತಾಯಿಸಿದರು.

 

 


Share this with Friends

Related Post