ಹೊಸದಿಲ್ಲಿಮಾ.24 : ಉತ್ತರ ಪ್ರದೇಶದ ವಾರಾಣಸಿ ಲೋಕಸಭೆ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎರಡು ಬಾರಿ ಸೋತಿದ್ದ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಅವರನ್ನೇ ಮೂರನೇ ಬಾರಿಗೆ ಕಣಕ್ಕಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿ ವಾರಾಣಸಿ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದು, ಮೂರನೇ ಬಾರಿ ಕೂಡ ಅವರಿಗೆ ಎದುರಾಳಿಯಾಗಿ ಅಜಯ್ ರಾಯ್ ಅಖಾಡಕ್ಕಿಳಿದಿದ್ದಾರೆ.
ಈ ಮೂಲಕ ವಾರಾಣಸಿ ಲೋಕಸಭೆ ಕ್ಷೇತ್ರದಿಂದ ಸತತ ನಾಲ್ಕನೇ ಸಲ ಅಜಯ್ ರಾಯ್ ಸ್ಪರ್ಧಿಸಿದಂತಾಗಲಿದೆ. ಹಿಂದಿನ ಮೂರೂ ಚುನಾವಣೆಗಳಲ್ಲಿ ಅವರು ಮೂರನೇ ಸ್ಥಾನ ಪಡೆಯಲಷ್ಟೇ ಶಕ್ತವಾಗಿದ್ದರು ಎನ್ನುವುದು ಗಮನಿಸಬೇಕಾದ ಸಂಗತಿ. 2014 ಮತ್ತು 2019ರಲ್ಲಿ ಪ್ರಧಾನಿ ಮೋದಿ ಅವರು ಬೃಹತ್ ಅಂತರದಿಂದ ಗೆಲುವು ಕಂಡಿದ್ದರು.
2014ರಲ್ಲಿ ಪ್ರಧಾನಿ ಮೋದಿ ಅವರು ಶೇ 56ಕ್ಕಿಂತ ಹೆಚ್ಚು ಮತಗಳನ್ನು (5.81 ಲಕ್ಷ) ಗಳಿಸಿದ್ದರು. ಅಜಯ್ ರಾಯ್ ಅವರು ಸುಮಾರು 75 ಸಾವಿರ ಮತ ಪಡೆದಿದ್ದರೆ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು 2.09 ಲಕ್ಷ ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿದ್ದರು. 2019ರಲ್ಲಿ ಮೋದಿ ಅವರು 6.74 ಲಕ್ಷ ಮತ ಗಳಿಸಿದ್ದರೆ, ಸಮಾಜವಾದಿ ಪಕ್ಷದ ಶಾಲಿನಿ ಯಾದವ್ 1.95 ಲಕ್ಷ ಮತಗಳನ್ನು ಪಡೆದಿದ್ದರು.
ಅಜಯ್ ರಾಯ್ ಅವರು 1.52 ಲಕ್ಷ ಮತಗಳೊಂದಿಗೆ ಮತ್ತೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ವಿಶೇಷವೆಂದರೆ ಅಜಯ್ ರಾಯ್ ಅವರು 2009ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗಲೂ ಅವರು ಮೂರನೇ ಸ್ಥಾನ ಪಡೆದಿದ್ದರು. ಈ ಚುನಾವಣೆಯಲ್ಲಿ ಬಿಜೆಪಿಯ ಮುರಳಿ ಮನೋಹರ್ ಜೋಶಿ ಗೆಲುವು ಸಾಧಿಸಿದ್ದರು.
ಅಜಯ್ ರಾಯ್ ಅವರು ಎಬಿವಿಪಿಯಿಂದ ರಾಜಕೀಯ ಆರಂಭಿಸಿದ್ದರು. 1996 ರಿಂದ 2007ರವರೆಗೂ ಮೂರು ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದವರು. 2009ರ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಸಮಾಜವಾದಿ ಪಕ್ಷ ಸೇರಿದ್ದರು. ಆದರೆ ಅವರಿಗೆ ಗೆಲುವು ಸಾಧ್ಯವಾಗಿರಲಿಲ್ಲ. ಮೂರು ವರ್ಷಗಳ ಬಳಿಕ ಕಾಂಗ್ರೆಸ್ ಸೇರಿದ್ದರು. ಈಗ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ 46 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಅಸ್ಸಾಂ 1, ಛತ್ತೀಸ್‌ಗಢ 1, ಜಮ್ಮು ಮತ್ತು ಕಾಶ್ಮೀರ 2, ಮಧ್ಯಪ್ರದೇಶ 12, ಮಹಾರಾಷ್ಟ್ರ 4, ಮಣಿಪುರ 2, ಮಿಜೋರಾಂ 1, ರಾಜಸ್ಥಾನ 3, ತಮಿಳುನಾಡು 7, ಉತ್ತರ ಪ್ರದೇಶ 9, ಉತ್ತರಾಖಂಡ 2, ಪಶ್ಚಿಮ ಬಂಗಾಳ 1 ಹಾಗೂ ಅಂಡಮಾನ್ ನಿಕೋಬಾರ್ 1 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ.