Mon. Dec 23rd, 2024

ಪೇಸ್ ಬುಕ್ ಪ್ರೇಮಿಯಿಂದ ಡಬಲ್ ಮರ್ಡರ್ : ವರ್ಷದ ಬಳಿಕ ಸಿಕ್ಕ ಮಾಹಿತಿ, ಹಂತಕ ಅರೆಸ್ಟ್

Share this with Friends

ವಿಜಯಪುರ, ಮಾ.24:ಫೇಸ್ ಬುಕ್ ನಲ್ಲಿ ಪರಿಚಿತನಾಗಿ ಲವ್ ಮಾಡಿ ನಂತರ‌ ಡಬಲ್ ಮರ್ಡರ್ ಮಾಡಿದ ಪಾಪಿ ಒಂದು‌ ವರ್ಷದ ಬಳಿಕ ಸಿಕ್ಕಿಬಿದ್ದ ಘಟನೆ ವಿಜಯಪುರದಲ್ಲಿ ನಡೆದಿದೆ.

ಒಂದು ವರ್ಷದ ಹಿಂದೆ ನಡೆದಿದ್ದ ತಾಯಿ-ಮಗನ ಕೊಲೆಯ ಕೇಸ್‌ ಅನ್ನು ವಿಜಯಪುರ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ಮೂಲದ ಶೃತಿ ಹಾಗೂ ಆಕೆಯ 13 ವರ್ಷದ ಮಗ ರೋಹನ್ ನನ್ನು ಪಾಪಿ ಹಂತಕ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ.

2023ರ ಮಾರ್ಚ್ 13ರಂದು ವಿಜಯಪುರದ ಸಾಗರ್ ನಾಯಕ್ ಎಂಬಾತ ತಾಯಿ‌ ಮಗನನ್ನು ಕೊಂದು ದೇಹಗಳನ್ನು ಬ್ಯಾಗ್‌ ನಲ್ಲಿ ತುಂಬಿ ಬಾವಿಗೆ ಬಿಸಾಡಿ ಪರಾರಿಯಾಗಿದ್ದ.

ಆರೋಪಿ ಸಾಗರ್ ನಾಯಕ್ ಮೈಸೂರಿನಲ್ಲಿದ್ದಾಗ ಫೇಸ್‌ಬುಕ್ ಮೂಲಕ ಶೃತಿ ಪರಿಚಯವಾಗಿತ್ತು ನಂತರ ಅದು ಪ್ರೀತಿಗೆ ತಿರುಗಿತ್ತು.

ಆದರೆ ಕೆಲವೇ ದಿನಗಳಲ್ಲಿ ಸಂಬಂಧ ಹಳಸಲಾರಂಭಿಸಿತ್ತು, ಸಾಗರ್ ಆಕೆಯ ನಡತೆ ಮೇಲೆ ಸಂಶಯಗೊಂಡು ವಿಜಯಪುರಕ್ಕೆ ಬಂದು ನೆಲೆಸಿದ್ದ.

ಆದರೆ ಸಾಗರ್‌ನನ್ನು ಬಹಳ ಪ್ರೀತಿಸುತ್ತಿದ್ದ ಶೃತಿ ಆತನನ್ನು ಭೇಟಿಯಾಗಲು 2023ರ ಮಾರ್ಚ್‌ 13ರಂದು ಮಗ ರೋಹಿತ್‌ ಜತೆಗೆ ಲಗೇಜ್ ಸಮೇತ ವಿಜಯಪುರಕ್ಕೆ ಬಂದಿದ್ದಳು.

ನಂತರ ಅಮ್ಮ-ಮಗನನ್ನು ಸಾಗರ್‌ ಬರಮಾಡಿಕೊಂಡು ಸಿಂದಗಿ ರಸ್ತೆಯ ಪೋರ್ ವೇ ಲಾಡ್ಜ್‌ ನಲ್ಲಿ ಇರಿಸಿದ್ದ.

ಲಾಡ್ಜ್‌ಗೆ ಬಂದಿದ್ದ ಸಾಗರ್‌, ಶೃತಿ ಜತೆ ಕ್ಯಾತೆ ತೆಗೆದು ಜಗಳವಾಡಿದ, ಸಿಟ್ಟಲ್ಲಿ ಆಕೆಯ ಕುತ್ತಿಗೆ ಹಿಸುಕಿ ಕೊಂದುಬಿಟ್ಟಿದ್ದ.

ಅಲ್ಲೇ‌ ಇದ್ದ ರೋಹಿತ್‌ ಯಾರಿಗಾದರು ಹೇಳುತ್ತಾನೆ ಎಂಬ ಆತಂಕದಲ್ಲಿ ಸಾಗರ್‌, ಆತನನ್ನೂ ಕೊಲೆ ಮಾಡಿಬಿಟ್ಟ.

ಶೃತಿ ಮೈಸೂರಿನಿಂದ ತಂದಿದ್ದ ಲಗೇಜ್‌ ಬ್ಯಾಗ್ ನಲ್ಲೇ ಅಮ್ಮ,ಮಗನ ದೇಹಗಳನ್ನು ಪ್ಯಾಕ್ ಮಾಡಿ ಮಹಾರಾಷ್ಟ್ರ ಗಡಿಯ ಸಿದ್ದಾಪುರ ಗ್ರಾಮದ ಹೊರವಲಯದಲ್ಲಿದ್ದ ಬಾವಿಯಲ್ಲಿ ಬಿಸಾಡಿ ಪರಾರಿಯಾಗಿದ್ದ.

ವಾರದ ಬಳಿಕ ಬಾವಿಯಲ್ಲಿ ಬ್ಯಾಗ್‌ಗಳು ತೇಲಿ ಬಂದಿತ್ತು,ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದರು.

ತಕ್ಷಣ ಸ್ಥಳಕ್ಕೆ ಧಾವಿಸಿದ ತ್ರಿಕೋಟ ಪೊಲೀಸರು ಬ್ಯಾಗ್ ಹೊರತೆಗೆಸಿ ಪರಿಶೀಲಿಸಿದಾಗ ಹೌಹಾರಿದರು.

ಬ್ಯಾಗ್ ನಲ್ಲಿ ತಾಯಿ- ಮಗನ ಕೊಳೆತ ಸ್ಥಿತಿಯಲ್ಲಿ ಶವಗಳು ಸಿಕ್ಕಿದ್ದವು,ಹಾಗಾಗಿ ಗುರುತು ಪತ್ತೆಯಾಗಿರಲಿಲ್ಲ.

ಕಳೆದ ಫೆಬ್ರವರಿಯಲ್ಲಿ ಶೃತಿ ಸಂಬಂಧಿಕರು ಮೈಸೂರಿನಲ್ಲಿ ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದರು.

ಈ ಮಿಸ್ಸಿಂಗ್ ಕೇಸ್ ಗೂ ವಿಜಯಪುರದಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೇಸ್‌ನಲ್ಲಿ ಸಿಕ್ಕ ವಸ್ತುಗಳಿಗೆ ಸಾಮ್ಯತೆ ಕಂಡುಬಂದಿತ್ತು.

ಜತೆಗೆ ಶೃತಿ ಸಂಬಂಧಿಕರು ಮೃತದೇಹಗಳನ್ನು ಗುರುತಿಸಿದ್ದರು, ಇದರ ಜಾಡು ಹಿಡಿದು ಶೃತಿಯ ಕಾಲ್‌ ಲಿಸ್ಟ್‌ ತೆರೆದಾಗ ಸಾಗರ್‌ ಗೆ ಕರೆ ಹೋಗಿದ್ದುದು ಗೊತ್ತಾಗಿ ತನಿಖೆ ಚುರುಕು ಗೊಳಿಸಿದಾಗ ಹಂತಕ ಸಿಕ್ಕಿಬಿದ್ದಿದ್ದಾನೆ.

ಪೊಲೀಸರು ಸಾಗರ್ ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತಾನೆ ಅಮ್ಮ,ಮಗನನ್ನು ಕೊಂದಿದ್ದಾಗಿ ಸಾಗರ್ ಬಾಯ್ಬಿಟ್ಟಿದ್ದಾನೆ.

ಗುರುತು,ಪರಿಚಯ ಇಲ್ಲದವನ ಹಿಂದೆ ಹೋಗಿ ಈ ರೀತಿ ಸಾಯಬೇಕಾಯಿತೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದು ಕಂಡು ಬಂದಿತು.


Share this with Friends

Related Post