Thu. Nov 26th, 2026

ಪುನೀತ್ ಕೆರೆಹಳ್ಳಿ ವಿರುದ್ಧ 45 ಪ್ರಕರಣ, ಕಾರ್ಯಕರ್ತರಿಗೆ ಬಾಂಡ್ ಒತ್ತಡ: ತನಿಖೆಗೆ ಆಗ್ರಹಿಸಿ ಡಿಜಿ–ಐಜಿಪಿಗೆ ಬಿಜೆಪಿ ನಾಯಕರ ದೂರು

Share this with Friends

ಬೆಂಗಳೂರು: ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಅವರ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 45 ಸರಣಿ ಪ್ರಕರಣಗಳನ್ನು ದಾಖಲಿಸಿ ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಹಾಗೂ ರಾಜ್ಯಾದ್ಯಂತ ಹಿಂದೂ ಕಾರ್ಯಕರ್ತರ ಮೇಲೆ ದೊಡ್ಡ ಮೊತ್ತದ ಬಾಂಡ್ ಷರತ್ತುಗಳನ್ನು ಹೇರುವ ಮೂಲಕ ಹೋರಾಟಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DGP & IGP) ದೂರು ಸಲ್ಲಿಸಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ, ಎನ್. ರವಿಕುಮಾರ್, ಶಾಸಕ ಸಿಮೆಂಟ್ ಮಂಜು, ಮುಖಂಡರಾದ ಚೇತನ್ ನಾಯ್ಕ್, ಪ್ರವೀಣ್ ಪೀಟರ್ ಹಾಗೂ ವಕೀಲ ಯಶವಂತ್ ಎಂ. ಅವರ ಸಹಿ ಇರುವ ದೂರು ಮನವಿ ಪತ್ರವನ್ನು ಡಿಜಿ–ಐಜಿಪಿ ಅವರಿಗೆ ಸಲ್ಲಿಸಲಾಗಿದ್ದು, ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.

ದೂರಿನಲ್ಲಿರುವ ಪ್ರಮುಖ ಅಂಶಗಳು:

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂ ಧಾರ್ಮಿಕ ಆಚರಣೆಗಳು ಹಾಗೂ ಸಾಮಾಜಿಕ ವಿಚಾರಗಳ ಪರವಾಗಿ ಧ್ವನಿ ಎತ್ತುವ ಕಾರ್ಯಕರ್ತರ ವಿರುದ್ಧ ಪೊಲೀಸ್ ಇಲಾಖೆ ನಿರಂತರವಾಗಿ ಪ್ರಕರಣಗಳನ್ನು ದಾಖಲಿಸುತ್ತಿದೆ. ಪುನೀತ್ ಕೆರೆಹಳ್ಳಿ ಅವರ ವಿರುದ್ಧ 45 ಪ್ರಕರಣಗಳನ್ನು ದಾಖಲಿಸಿ, ಒಂದು ವರ್ಷದ ಬಾಂಡ್ ಷರತ್ತು ವಿಧಿಸಿ ಸುಮಾರು ಮೂರು ತಿಂಗಳಿನಿಂದ ಜೈಲಿನಲ್ಲಿ ಇರಿಸಲಾಗಿದೆ. ಒಬ್ಬ ವ್ಯಕ್ತಿಯ ವಿರುದ್ಧ ಇಷ್ಟೊಂದು ಪ್ರಕರಣಗಳು ದಾಖಲಾಗುವ ಹಿಂದೆ ಪೂರ್ವಾಗ್ರಹವಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ಕರೆಸಿ, ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ಒತ್ತಡ ಹೇರಲಾಗುತ್ತಿದೆ. ಕೆಲವು ಕಾರ್ಯಕರ್ತರಿಗೆ ಲಕ್ಷಾಂತರ ರೂಪಾಯಿಗಳ ಬಾಂಡ್ ಬರೆಯುವಂತೆ ಸೂಚಿಸಿ ಸಂವಿಧಾನದ ಅನುಚ್ಛೇದ 14, 19 ಹಾಗೂ 21ರಡಿ ಲಭ್ಯವಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರತಿಭಟನೆಯ ಹಕ್ಕನ್ನು ನಿಗ್ರಹಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಪ್ರಮುಖ ಬೇಡಿಕೆಗಳು:

ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿರುವ 45 ಪ್ರಕರಣಗಳ ಹಿನ್ನೆಲೆ, ಸಾಕ್ಷ್ಯಾಧಾರ ಹಾಗೂ ಬಾಂಡ್ ಷರತ್ತು ವಿಧಿಸಿರುವ ಪ್ರಕ್ರಿಯೆಯ ಕಾನೂನುಬದ್ಧತೆಯ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಪರಿಶೀಲನಾ ಸಮಿತಿ ರಚಿಸಿ ತನಿಖೆ ನಡೆಸಬೇಕು. ಮೂರು ತಿಂಗಳಿನಿಂದ ಜೈಲಿನಲ್ಲಿರುವ ಅವರಿಗೆ ಕಾನೂನುಬದ್ಧ ಜಾಮೀನು ಅಥವಾ ಪರಿಹಾರ ಸಿಗುವ ನಿಟ್ಟಿನಲ್ಲಿ ಪ್ರಕರಣಗಳ ಸ್ಥಿತಿಗತಿ ಪರಿಶೀಲಿಸಬೇಕು. ಅಲ್ಲದೆ, ಕಾರ್ಯಕರ್ತರ ಮೇಲೆ ಹೇರುತ್ತಿರುವ ಅನಾವಶ್ಯಕ ಬಾಂಡ್ ಒತ್ತಡವನ್ನು ತಕ್ಷಣವೇ ನಿಲ್ಲಿಸುವಂತೆ ಎಲ್ಲಾ ಜಿಲ್ಲಾ ಪೊಲೀಸ್ ಘಟಕಗಳಿಗೆ ನಿರ್ದೇಶನ ನೀಡಿ, ದೂರಿಗೆ ಲಿಖಿತ ಉತ್ತರ ನೀಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

 

 


Share this with Friends

Related Post