Thu. Nov 26th, 2026

ಬಲ್ಡೋಟಾ ವಿವಾದ: ಕೆರೆ ನಿರ್ಮಾಣದ ಸಾಧ್ಯತೆ ಕುರಿತು ಅಧಿಕಾರಿಗಳಿಂದ ವರದಿ ಕೇಳಿದ್ದೇನೆ ಎಂದ ಸಿಎಂ ಡಿ.ಕೆ. ಶಿವಕುಮಾರ್

Share this with Friends

ಕೊಪ್ಪಳ: ಬಲ್ಡೋಟಾ ಕಾರ್ಖಾನೆ ವಿರುದ್ಧ ನಡೆಯುತ್ತಿರುವ ಹೋರಾಟ, ಸ್ಥಳೀಯರ ಬೇಡಿಕೆ ಹಾಗೂ ಗವಿಸಿದ್ದೇಶ್ವರ ಶ್ರೀಗಳ ಒತ್ತಾಯದ ಹಿನ್ನೆಲೆಯಲ್ಲಿ, ಸೂಕ್ತ ಸ್ಥಳದಲ್ಲಿ ಕೆರೆ ನಿರ್ಮಿಸುವ ಸಾಧ್ಯತೆಯ ಕುರಿತು ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ವರದಿ ಕೈಸೇರಿದ ಬಳಿಕ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಕೊಪ್ಪಳದ ಬಸಾಪುರ ಏರ್ ಸ್ಟ್ರಿಪ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಲ್ಡೋಟಾ ವಿವಾದ, ಸಂವಿಧಾನ ತಿದ್ದುಪಡಿ, ಅಹಿಂದ ಸಭೆ ಹಾಗೂ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು ವಿವರವಾಗಿ ಪ್ರತಿಕ್ರಿಯಿಸಿದರು.

ಸಂವಿಧಾನ ತಿದ್ದುಪಡಿ ಕುರಿತು ಸ್ಪಷ್ಟನೆ:

ಸಂವಿಧಾನ ಬದಲಾವಣೆ ಕುರಿತ ತಮ್ಮ ಹೇಳಿಕೆಗೆ ಬಿಜೆಪಿ ನಾಯಕರು ವ್ಯಕ್ತಪಡಿಸುತ್ತಿರುವ ಟೀಕೆಗೆ ಉತ್ತರಿಸಿದ ಸಿಎಂ, “ನಾನು ಹೇಳಿರುವ ಸಂವಿಧಾನ ಬದಲಾವಣೆ ಎಂದರೆ ಬಿಜೆಪಿಯವರು ಬಿಂಬಿಸುವ ರೀತಿಯದಲ್ಲ. ಜನರ ಭಾವನೆ, ಅಗತ್ಯ ಮತ್ತು ಅಭಿವೃದ್ಧಿಗೆ ಪೂರಕವಾಗಿ ಮಾಡುವ ತಿದ್ದುಪಡಿಯಾಗಿದೆ. ಸಂವಿಧಾನದ 371(ಜೆ) ಕಲಂ ಜಾರಿಯಿಂದ ಕಲ್ಯಾಣ ಕರ್ನಾಟಕ ಭಾಗದ ಯುವಜನರಿಗೆ ಉದ್ಯೋಗ, ವೈದ್ಯಕೀಯ-ಎಂಜಿನಿಯರಿಂಗ್ ಸೀಟು ಹಾಗೂ ಉನ್ನತ ಹುದ್ದೆಗಳು ಸಿಗುವಂತಾಗಿದೆ. ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಜಾತ್ಯತೀತ ಎಂಬ ಪದ ಸೇರಿಸಲಾಯಿತು. ನಾನು ಉಲ್ಲೇಖಿಸಿದ್ದು ಇಂತಹ ಜನಪರ ತಿದ್ದುಪಡಿಗಳ ಬಗ್ಗೆ” ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅಹಿಂದ ಸಭೆ ಮಾಡಿದರೆ ತಪ್ಪೇನಿದೆ?

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಹಿಂದ ನಾಯಕರ ಸಭೆ ನಡೆಸುತ್ತಿರುವ ಕುರಿತ ಪ್ರಶ್ನೆಗೆ, “ಅವರು ಅಹಿಂದ ಸಭೆ ಮಾಡಿದರೆ ಅದರಲ್ಲಿ ತಪ್ಪೇನಿದೆ?” ಎಂದು ಮರುಪ್ರಶ್ನಿಸಿದರು. ಅಲ್ಲದೆ, ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಒಟ್ಟಿಗೆ ಇರುವ ವಿಚಾರಕ್ಕೆ, “ಒಂದೇ ಪಕ್ಷದವರು ಚೆನ್ನಾಗಿಯೇ ಇದ್ದಾರೆ, ನೀವೇಕೆ ತಲೆಕೆಡಿಸಿಕೊಳ್ಳುತ್ತೀರಿ?” ಎಂದರು.

ಆಶಾ ಕಾರ್ಯಕರ್ತೆಯರಿಗೆ ಲಿಖಿತ ಭರವಸೆ ಅಸಾಧ್ಯ:

ಆಶಾ ಕಾರ್ಯಕರ್ತೆಯರ ಮುಷ್ಕರದ ಬಗ್ಗೆ ಮಾತನಾಡಿದ ಶಿವಕುಮಾರ್, “ಆಶಾ ಕಾರ್ಯಕರ್ತೆಯರು ನಮ್ಮ ಹೆಣ್ಣುಮಕ್ಕಳು. ಅವರ ಶ್ರಮದ ಬಗ್ಗೆ ನಮಗೆ ಗೌರವ ಮತ್ತು ಸಹಾನುಭೂತಿ ಇದೆ. ಆದರೆ, ಅವರು ಕೇಳುತ್ತಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಯಾವುದೇ ಸರ್ಕಾರಕ್ಕೂ ಲಿಖಿತವಾಗಿ ಬರೆದುಕೊಡಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

“ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಜಾರಿಯಾದ ಈ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಹೆಚ್ಚಿಸಬೇಕು. ರಾಜ್ಯ ಸರ್ಕಾರವೊಂದನ್ನೇ ಗುರಿಯಾಗಿಸಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ಕೆಲವರು ಸಿನಿಮಾ ಕ್ಷೇತ್ರದವರನ್ನು ಹಾಗೂ ಕಾರ್ಯಕರ್ತರನ್ನು ಕಳುಹಿಸಿ ಈ ಹೋರಾಟವನ್ನು ರಾಜಕೀಯಗೊಳಿಸುತ್ತಿದ್ದಾರೆ. ಕಾರ್ಯಕರ್ತೆಯರು ರಾಜಕೀಯಕ್ಕೆ ಬಲಿಯಾಗದೆ ಕರ್ತವ್ಯಕ್ಕೆ ಮರಳಬೇಕು” ಎಂದು ಮನವಿ ಮಾಡಿದರು. ಇದೇ ವೇಳೆ, ಕಾಂಗ್ರೆಸ್ ಸರ್ಕಾರ ಅನ್‌ಫಿಟ್ ಆಗಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಟೀಕೆಗೆ, “ನಾವು ಫಿಟ್ ಮಾಡಿಕೊಳ್ಳುತ್ತೇವೆ, ಅವರೇ ಫಿಟ್ ಮಾಡಲಿ” ಎಂದು ಸಿಎಂ ತಿರುಗೇಟು ನೀಡಿದರು.

 


Share this with Friends

Related Post