ಮೈಸೂರು,ಮಾ.25: ಪ್ರತಿಯೊಬ್ಬರೂ ಮತದಾನದ ಪ್ರಾಮುಖ್ಯತೆ ತಿಳಿದು ತಮ್ಮ ಹಕ್ಕು ಚಲಾಯಿಸಬೇಕು ಎಂದು ಸಹಾಯಕ ಸ್ವೀಪ್ ನೋಡಲ್ ಅಧಿಕಾರಿ ಎಂ.ಶಾಂತ ತಿಳಿಸಿದರು.
ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ತಾಲೂಕು ಮಟ್ಟದ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಮತದಾರರು ಆಸೆ ಆಮಿಷಗಳಿಗೆ ಒಳಗಾಗದೆ ಸ್ವಯಂ ನಿರ್ಣಯ ಕೈಗೊಂಡು ಉತ್ತಮ ನಾಯಕನನ್ನು ಆಯ್ಕೆ ಮಾಡಲು ನೈತಿಕ ಮತದಾನ ಮಾಡಬೇಕು ಎಂದು ಹೇಳಿದರು.
ಜನರಿಗೆ ಮತದಾನದ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ನೋಂದಣಿ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿ, ಪ್ರತಿಯೊಬ್ಬ ಮತದಾರನೂ ಮತದಾನದಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ಶಾಂತಾ ಸೂಚಿಸಿದರು.
ಕಾರ್ಯಕ್ರಮದಲ್ಲಿ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಡಾ.ರಂಜಿನಿ, ಪ್ರೌಢಶಾಲಾ ವಿಭಾಗದ ನೋಡಲ್ ಅಧಿಕಾರಿ ದೇವರಾಜು, ಸದಸ್ಯರಾದ ಡಾ.ಹೇಮಲತಾ, ಡಾ. ಶಶಿಕಲಾ, ಡಾ. ಮಂಗಳ ಮೂರ್ತಿ, ಹೆಚ್. ಎಸ್ ಪ್ರಕಾಶ್, ಮಂಜುನಾಥ್. ಬಿ., ಶಿವಕುಮಾರ್ ಬಿ. ಎಲ್., ನಾಗಚಂದ್ರ, ರಮೇಶ್ ಬಿ. ಮತ್ತಿತರರು ಉಪಸ್ಥಿತರಿದ್ದರು.