ಮೈಸೂರು, ಮಾ.25: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಲೋಕಸಭಾ ಚುನಾವಣೆ ಚಾಲೆಂಜ್ ಆಗಿ ಪರಿಣಮಿಸಿದೆ.
ಅದಕ್ಕಾಗಿ ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರನ್ನು ಗೆಲ್ಲಿಸಲೇಬೇಕೆಂಬ ಹಠಕ್ಕೆ ಬಿದ್ದು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಎಲ್ಲಾ ರೀತಿಯ ತಂತ್ರಗಳನ್ನು ಹೆಣೆಯು
ತ್ತಿದ್ದಾರೆ,ಅದಕ್ಕಾಗಿಯೇ ಸಿದ್ದು ಬಿಜೆಪಿಯಿಂದ ಕಾಂಗ್ರೆಸ್ ಗೆ ಬರುವವರನ್ನು ಕರೆತರಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಯಾರು ಬರುವುದು ಬೇಡ ಎಂದು ಈವರೆಗೂ ಹೇಳುತ್ತಿದ್ದ ಸಿದ್ದರಾಮಯ್ಯ, ಈಗ ಪರಿಸ್ಥಿತಿಯನ್ನು ನೋಡಿ ಅದೆಷ್ಟು ಜನ ಬಿಜೆಪಿಗರು ಕಾಂಗ್ರೆಸ್ಸಿಗೆ ಬರಲು ಸಾಧ್ಯವೋ ಅವರನ್ನೆಲ್ಲಾ ಈ ತಿಂಗಳ ಅಂತ್ಯದೊಳಗೆ ಪಕ್ಷಕ್ಕೆ ಕರೆತರುವಂತೆ ಆದೇಶ ನೀಡಿದ್ದಾರೆ.
ಬಿಜೆಪಿ ಸದಸ್ಯರಾಗಿದ್ದ ಬಿಎಸ್ ವೈ ಅತ್ಯಾಪ್ತನೆಂದು ಗುರುತಿಸಿಕೊಂಡಿದ್ದ ಹೆಚ್. ವಿ. ರಾಜೀವ್ ಅವರನ್ನು ಸೆಳೆಯುವಲ್ಲಿ ಈಗಾಗಲೇ ಕಾಂಗ್ರೆಸ್ ಯಶಸ್ವಿಯಾಗಿದೆ.
ಎಚ್ ವಿ ರಾಜೀವ್ ಅವರು ಮಾ. 27ರಂದು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಅದೇ ರೀತಿ ಬಿಜೆಪಿಯಲ್ಲಿ ತುಳಿತಕ್ಕೊಳಗಾದವರನ್ನು ಗುರುತಿಸಿ ಈ ತಿಂಗಳ ಅಂತ್ಯದೊಳಗೆ ಕಾಂಗ್ರೆಸ್ಸಿಗೆ ಕರೆತರುವಂತೆ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಹಾಗಾಗಿ ಕಾರ್ಯಪ್ರವೃತ್ತರಾಗಿರುವ ಕಾಂಗ್ರೆಸ್ಸಿನ ನಾಯಕರು ಸ್ಥಳೀಯ ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಅವರನ್ನು ಕರೆತರುವ ಕಾರ್ಯದಲ್ಲಿ ಮುಂದಾಗಿದ್ದಾರೆ.