Tue. Dec 24th, 2024

ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ಇದೇ ಮೊದಲ ಬಾರಿಗೆ ಬೀಜಿಂಗ್‌ ಹಿಂದಿಕ್ಕಿದ ಮುಂಬೈ

Mumbai And Beijing
Share this with Friends

ಮುಂಬೈ.ಮಾ.26 : ಮುಂಬೈ ನಗರವು ಮೊದಲ ಬಾರಿಗೆ ಏಷ್ಯಾದ ಬಿಲಿಯನೇರ್ ರಾಜಧಾನಿಯಾಗಿದೆ. ಹುರುನ್ ರಿಸರ್ಚ್‌ನ 2024 ರ ಜಾಗತಿಕ ಶ್ರೀಮಂತ ಪಟ್ಟಿಯಲ್ಲಿ ಭಾರತದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ವಾಸಿಸುವ ಬಿಲಿಯನೇರ್‌ಗಳ ಸಂಖ್ಯೆ ಈಗ ಚೀನಾದ ರಾಜಧಾನಿ ಬೀಜಿಂಗ್‌ಗಿಂತ ಹೆಚ್ಚಾಗಿದೆ. ಹುರುನ್ ರಿಸರ್ಚ್‌ನ 2024 ರ ಜಾಗತಿಕ ಶ್ರೀಮಂತ ಪಟ್ಟಿಯಲ್ಲಿ ಮುಂಬೈನಲ್ಲಿ 92 ಬಿಲಿಯನೇರ್‌ಗಳಿದ್ದರೆ, ಇವರ ಸಂಖ್ಯೆ ಬೀಜಿಂಗ್‌ನಲ್ಲಿ 91 ಆಗಿದೆ.

ಬಿಲಿಯನೇರ್‌ಗಳ ಪಟ್ಟಿಯಲ್ಲಿ ವಿಶ್ವಾದ್ಯಂತ ಮುಂಬೈ ನಗರವು ಮೂರನೇ ಸ್ಥಾನವನ್ನು ತಲುಪಿದೆ. ಹುರುನ್‌ನ ಪಟ್ಟಿಯ ಪ್ರಕಾರ, 119 ಬಿಲಿಯನೇರ್‌ಗಳಿಗೆ ನೆಲೆಯಾಗಿರುವ ನ್ಯೂಯಾರ್ಕ್ ಮೊದಲ ಸ್ಥಾನದಲ್ಲಿದೆ. ಏಳು ವರ್ಷಗಳ ನಂತರ ಈ ಪಟ್ಟಿಯಲ್ಲಿ ನ್ಯೂಯಾರ್ಕ್ ಮೊದಲ ಸ್ಥಾನ ಪಡೆದಿದೆ. 97 ಬಿಲಿಯನೇರ್‌ಗಳಿರುವ ಲಂಡನ್ ಎರಡನೇ ಸ್ಥಾನದಲ್ಲಿದೆ. ಏಷ್ಯಾದಲ್ಲಿ ಈ ವರ್ಷ ಮುಂಬೈನಲ್ಲಿ 26 ಬಿಲಿಯನೇರ್‌ಗಳು ಹೆಚ್ಚಿದ್ದರೆ, ಬೀಜಿಂಗ್‌ನಲ್ಲಿ 18 ಕಡಿಮೆಯಾಗಿದೆ.

ವಿಶ್ವದಾದ್ಯಂತ ತೆಗೆದುಕೊಂಡರೆ ಚೀನಾದಲ್ಲಿ ಒಟ್ಟು ಶತಕೋಟ್ಯಾಧಿಪತಿಗಳ ಸಂಖ್ಯೆ 814 ಆಗಿದ್ದರೆ, ಭಾರತದಲ್ಲಿ ಒಟ್ಟು 271 ಬಿಲಿಯನೇರ್‌ಗಳಿದ್ದಾರೆ. ಆದರೆ ಜಾಗತಿಕ ಶ್ರೇಯಾಂಕದಲ್ಲಿ ಭಾರತೀಯ ಬಿಲಿಯನೇರ್‌ಗಳ ಸ್ಥಾನವು ಸ್ವಲ್ಪ ದುರ್ಬಲವಾಗಿದೆ.

ಜಾಗತಿಕ ಶತಕೋಟ್ಯಾಧಿಪತಿಗಳ ಪಟ್ಟಿ ನೋಡುವುದಾದರೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ 10ನೇ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ ಎಂಟನೇ ಮತ್ತು ಎಚ್‌ಸಿಎಲ್‌ನ ಶಿವ ನಾಡಾರ್ ಮತ್ತು ಅವರ ಕುಟುಂಬ 16 ನೇ ಸ್ಥಾನ ಪಡೆದಿದ್ದಾರೆ. ಆದರೆ, ಸೀರಮ್ ಸಂಸ್ಥೆಯ ಸೈರಸ್ ಎಸ್ ಪೂನಾವಾಲಾ ರಾಂಕಿಂಗ್ ಕುಸಿದಿದೆ. ಅವರ ರಾಂಕ್ 9 ಸ್ಥಾನ ಕುಸಿದು 55ನೇ ಸ್ಥಾನಕ್ಕೆ ತಲುಪಿದೆ. ಸನ್ ಫಾರ್ಮಾಸ್ಯುಟಿಕಲ್ಸ್‌ನ ದಿಲೀಪ್ ಸಾಂಘ್ವಿ 61ನೇ ಹಾಗೂ ಕುಮಾರ್ ಮಂಗಳಂ ಬಿರ್ಲಾ ಮತ್ತು ರಾಧಾಕೃಷ್ಣ ದಮಾನಿ 100ನೇ ರಾಂಕ್ ಪಡೆದಿದ್ದಾರೆ.

ಮುಂಬೈನ ಎಲ್ಲಾ ಕೋಟ್ಯಾಧಿಪತಿಗಳ ಒಟ್ಟು ಸಂಪತ್ತು 37 ಲಕ್ಷ ಕೋಟಿ ರೂ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅಂಕಿ ಅಂಶ ಶೇ 47ರಷ್ಟು ಹೆಚ್ಚಾಗಿದೆ. ಇದೇ ಸಮಯದಲ್ಲಿ, ಬೀಜಿಂಗ್‌ನ ಬಿಲಿಯನೇರ್‌ಗಳ ಒಟ್ಟು ಸಂಪತ್ತು ಸರಿಸುಮಾರು 22 ಲಕ್ಷ ಕೋಟಿ ರೂ. ಬೀಜಿಂಗ್‌ನ ಬಿಲಿಯನೇರ್‌ಗಳ ಒಟ್ಟು ಸಂಪತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 28 ರಷ್ಟು ಕುಸಿದಿದೆ.


Share this with Friends

Related Post