Fri. Nov 1st, 2024

ಯಾರೋ ಒಂದಿಬ್ಬರು ಬಿಜೆಪಿಯಿಂದ ಹೋದರೆ ತಲೆಕೆಡಿಸಿಕೊಳ್ಳಲ್ಲ:ನಾಗೇಂದ್ರ

Share this with Friends

ಮೈಸೂರು,ಮಾ.26: ಯಾರೋ ಒಂದಿಬ್ಬರು ಬಿಜೆಪಿಯಿಂದ ಹೋದರೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ, ನಮ್ಮ ಪಕ್ಷಕ್ಕೆ ಸಾವಿರಾರು ಜನರು ಬರುತ್ತಾರೆ ಎಂದು ಮಾಜಿ ಶಾಸಕ ಎಲ್.ನಾಗೇಂದ್ರ ಹೇಳಿದ್ದಾರೆ.

ಮುಡಾ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ಸಂಬಂಧ ಪ್ರತಿಕ್ರಿಯಿಸಿದ ನಾಗೇಂದ್ರ, ಯಾರೋ ಇಬ್ಬರು ಮೂವರು ಹೋದ್ರೆ ತಲೆ ಕೆಡಿಸಿಕೊಳ್ಳಲ್ಲ ಎಂದರು.

ಎಚ್.ವಿ ರಾಜೀವ್ ಅವರು ಬಿಜೆಪಿಯಿಂದ‌ ಹೊರಗೆ ಹೋಗುವುದರಿಂದ ನಮ್ಮ ಪಕ್ಷಕ್ಕೆ ಯಾವುದೇ ತೊಂದರೆ ಆಗುವುದಿಲ್ಲ, ಈಗಾಗಲೇ ಅವರು ರಾಜಿನಾಮೆ ನೀಡಿದ್ದಾರೆ, ಅವರ ಮನವೊಲಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲೇ ಅವರು ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದರು, ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಸಹಜ,ಆದರೆ ಇದರಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗೋದಿಲ್ಲ ಎಂದು ಹೇಳಿದರು.

ಮೈಸೂರು-ಕೊಡಗು ಕ್ಷೇತ್ರದಿಂದ ಎಂ.ಲಕ್ಷ್ಮಣ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಲ್ .ನಾಗೇಂದ್ರ, ಕಾಂಗ್ರೆಸ್ ಪಕ್ಷ ಒಕ್ಕಲಿಗ ವಿರೋಧಿ. ಒಕ್ಕಲಿಗರಿಗೆ ಟಿಕೆಟ್ ಕೊಡಲು 41 ವರ್ಷ ಬೇಕಿತ್ತಾ ಎಂದು ಪ್ರಶ್ನಿಸಿದರು.

ಹಾಳಾದ ಊರಿಗೆ ಉಳಿದವನೇ ಗೌಡ ಅಂತ ಲಕ್ಷ್ಮಣ್ ಗೆ ಟಿಕೆಟ್ ಕೊಟ್ಟಿದ್ದಾರೆ,ಈ ಮುಂಚೆ ಯಾಕೆ ಒಕ್ಕಲಿಗ ಸಮುದಾಯಕ್ಕೆ ಅವಕಾಶ ಕೊಟ್ಟಿರಲಿಲ್ಲ ಎಂದರು.

ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮೈಸೂರಿಗೆ ಆಗಮಿಸಲಿದ್ದು, ಬೆಳಗ್ಗೆ 8.30 ಕ್ಕೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ ನಂತರ ಮಡಿಕೇರಿ ಪ್ರವಾಸ ಮಾಡಲಿದ್ದಾರೆ,ಸಂಜೆ ಮತ್ತೆ ಮೈಸೂರಿಗೆ ವಾಪಸಾಗಿ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಲೋಕಸಭಾ ಅಭ್ಯರ್ಥಿ ಯದುವೀರ್ ಮತ್ತು ಬಿಜೆಪಿ ಮುಖಂಡರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಚುನಾವಣೆ ಎದುರಿಸಲು ರೂಪುರೇಷೆಗಳ ಕುರಿತು ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದರು ನಾಗೇಂದ್ರ.


Share this with Friends

Related Post