ಮೈಸೂರು, ಮಾ.27: ವಿಶೇಷಚೇತನ ಮತದಾರರು ಮುಕ್ತ, ಸುಗಮ ರೀತಿಯಲ್ಲಿ ಮತದಾನ ಮಾಡಲು ಭಾರತ ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ಸಕ್ಷಮ್ ಆಪ್ ಪರಿಚಯಿಸಿದೆ.
ಮತದಾರರ ಪಟ್ಟಿಯಲ್ಲಿರುವ ವಿಶೇಷಚೇತನರು ಈ ಆಪ್ ಬಳಕೆ ಮಾಡಿ ಚುನಾವಣೆಗೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ, ಜಿಪಂ ಸಿಇಒ ಕೆ.ಎಂ.ಗಾಯಿತ್ರಿ ತಿಳಿಸಿದ್ದಾರೆ.
ಈ ಆಪ್ ನಲ್ಲಿ ಮತದಾರರಾಗಿ ಹೊಸದಾಗಿ ನೋಂದಣಿ ಮಾಡುವುದು, ಮತಗಟ್ಟೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಮಾಹಿತಿ ಪಡೆಯುವುದು, ಮತಗಟ್ಟೆಗೆ ತೆರಳಲು ತ್ರಿಚಕ್ರವಾಹನವನ್ನು ಮುಂಗಡವಾಗಿ ಕಾಯ್ದಿರಿಸುವುದು, ದೂರು ದಾಖಲಿಸುವುದು ಮತ್ತು ಭಾರತ ಚುನಾವಣಾ ಆಯೋಗವು ಹೊರತಂದಿರುವ ಎಲ್ಲಾ ಚುನಾವಣಾ ಲೇಖನಗಳು ಹಾಗೂ ಸಂದೇಶಗಳನ್ನು ನೋಡಬಹುದಾಗಿರುತ್ತದೆ.
ಮತಗಟ್ಟೆಯು ವಿಶೇಷ ಚೇತನ ಸ್ನೇಹಿ ಉಪ ಕ್ರಮಗಳಾದ ನೆಲ ಅಂತಸ್ತಿನಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಿರುವುದು,ರ್‍ಯಾಂಪ್ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ, ದೃಷ್ಠಿದೋಷವುಳ್ಳವರಿಗೆ ಬ್ರೈಲ್ ಲಿಪಿಯಲ್ಲಿ ಮಾದರಿ ಮತ ಪತ್ರವನ್ನು ಮುದ್ರಿಸಿ ಪ್ರದರ್ಶಿಸಿರುವುದು, ಸ್ವಯಂ ಸೇವಕರ ನೇಮಕ, ಕುಡಿಯುವ ನೀರು ನೆರಳು, ಶೌಚಾಲಯ, ತ್ರಿಚಕ್ರವಾಹನ ವ್ಯವಸ್ಥೆ, ಪ್ರತ್ಯೇಕ ಸರತಿ ಸಾಲು ವ್ಯವಸ್ಥೆ, ಕಲ್ಪಿಸಿರುವುದರ ಬಗ್ಗೆ ಆಪ್ ಮೂಲಕ ಮಾಹಿತಿಯನ್ನು ಪಡೆದು ಮತಗಟ್ಟೆಯಲ್ಲಿ ಆರಾಮವಾಗಿ ಮತದಾನ ಮಾಡಬಹುದು.
ಭಾರತ ಚುನಾವಣಾ ಆಯೋಗ ಹೊರತಂದಿರುವ ಎಲ್ಲಾ ಮಾರ್ಗಸೂಚಿಗಳು, ಸಂದೇಶಗಳು ಇ.ವಿ.ಎಂ ಹಾಗೂ ವಿ.ವಿ.ಪ್ಯಾಟ್ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಎಲ್ಲಾ ಸೌಲಭ್ಯಗಳು ಇರುವುದರಿಂದ ವಿಶೇಷ ಚೇತನ ಮತದಾರರು ಸಂತೋಷದಿಂದ ನಿರ್ಭೀತರಾಗಿ, ಆರಾಮವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಿಬೇಕೆಂದು ಕೆ.ಎಂ.ಗಾಯಿತ್ರಿ ತಿಳಿಸಿದ್ದಾರೆ.